ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ: ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಲೋಕಸಭೆಯಲ್ಲಿ ಇಂದು ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಕ್‌ಪ್ರಹಾರ ಮಾಡಿದ್ದಾರೆ.

ಬುಧವಾರ ಮಧ್ಯಾಹ್ನ 12ಕ್ಕೆ ಲೋಕಸಭೆ (Lok sabha) ಕಲಾಪ ಪುನಾರಂಭವಾಗಿದ್ದು, ಈ ವೇಳೆ ಮಾತನಾಡಿದ ಅವರು, ಮಣಿಪುರದಲ್ಲಿ ಭಾರತ ಮಾತೆಯನ್ನು ಕೇಂದ್ರ ಸರ್ಕಾರ ಹತ್ಯೆ ಮಾಡಿದೆ. ಮಣಿಪುರದ ಅಸ್ಮಿತೆಯಲ್ಲಿ ಹತ್ಯೆಯಾಗಿರುವುದು ಭಾರತ ಮಾತೆ. ಅವರ ರಾಜಕೀಯ ಮಣಿಪುರವನ್ನು ಕೊಂದಿಲ್ಲ, ಆದರೆ ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದೆ. ಕೇಂದ್ರ ಸರ್ಕಾರ ಮಣಿಪುರದಲ್ಲಿ ಭಾರತವನ್ನು ಹತ್ಯೆ ಮಾಡಿದ್ದಾರೆ. ನೀವು ದೇಶಭಕ್ತರಲ್ಲ, ದೇಶದ್ರೋಹಿಗಳು ಎಂದು ಟೀಕಿಸಿದರು.

ಈ ವೇಳೆ ಭಾರತ ಮಾತೆಯನ್ನು ಹತ್ಯೆ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ ಮಾತಿಗೆ ಸ್ವತಃ ಸ್ಪೀಕರ್‌ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದ್ದು,ಇದು ದೇಶದ ಸಂಸತ್ತು. ಇಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಿದ್ದಾರೆ. ಎನ್ನುವ ಪದಗಳನ್ನೆಲ್ಲಾ ಬಳಸಬಾರದು. ನೀವು ಹಿರಿಯ ಸಂಸದರಾಗಿದ್ದೀರಿ ಇದರ ಬಗ್ಗೆ ಎಚ್ಚರಿಕೆ ಇರಲಿ ಎಂದು ಹೇಳಿದ್ದಾರೆ.

ಮಾತು ಮುಂದುವರಿ,ಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಪ್ರಧಾನಿಯವರು ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡಿಲ್ಲ. ಅವರು ಮಣಿಪುರವನ್ನು ಎರಡಾಗಿ ವಿಭಜಿಸಿದ್ದಾರೆ. ಇವರು ಮಣಿಪುರದಲ್ಲಿ ಕೇವಲ ಮಣಿಪುರದ ಹತ್ಯೆ ಮಾಡಿಲ್ಲ. ಅವರು ಇಡೀ ಹಿಂದುಸ್ತಾನ್‌ನ ಹತ್ಯೆ ಮಾಡಿದ್ದಾರೆ. ಭಾರತ ಎನ್ನುವುದು ನಮ್ಮ ದನಿಯಾಗಿದೆ. ಭಾರತ ನಮ್ಮ ಜನರ ದನಿ, ಹೃದಯದ ಶಬ್ದವಾಗಿದೆ. ಮಣಿಪುರದಲ್ಲಿ ಇದೇ ದನಿಯನ್ನು ನೀವು ಹತ್ಯೆ ಮಾಡಿದ್ದೀರಿ. ಇದರ ಅರ್ಥ ಏನೆಂದರೆ, ನೀವು ಮಣಿಪುರದಲ್ಲಿ ಹತ್ಯೆ ಮಾಡಿರುವುದು ಭಾರತ ಮಾತೆಯನ್ನು. ಮಣಿಪುರದ ಜನರನ್ನು ಕೊಲೆ ಮಾಡುವ ಮೂಲಕ ನೀವು ಭಾರತ ಮಾತೆಯನ್ನು ಹತ್ಯೆ ಮಾಡಿದ್ದೀರಿ. ನೀವು ದೇಶದ್ರೋಹಿಗಳು. ನೀವೆಂದೂ ದೇಶಭಕ್ತರಾಗಲು ಸಾಧ್ಯವಿಲ್ಲ. ನೀವು ಮಣಿಪುರದಲ್ಲಿ ದೇಶದ ಹತ್ಯೆ ಮಾಡಿದ್ದೀರಿ ಎಂದು ಹೇಳಿದ್ದಾರೆ.

ನಾನು ನನ್ನ ತಾಯಿಯ ಹತ್ಯೆ ಬಗ್ಗೆ ಮಾತನಾಡುತ್ತಿದ್ದೇನೆ. ಮಣಿಪುರದಲ್ಲಿ ನನ್ನ ತಾಯಿಯ ಹತ್ಯೆಯಾಗಿರುವ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಆಧಾರ ಇಟ್ಟುಕೊಂಡು ಮಾತನಾಡುತ್ತಿದ್ದೇನೆ. ಮಣಿಪುರದಲ್ಲಿ ನನ್ನ ತಾಯಿಯ ಹತ್ಯೆಯಾಗಿದೆ. ನನ್ನ ಒಂದು ತಾಯಿ ಇಲ್ಲಿ ಕುಳಿತುಕೊಂಡಿದ್ದಾಳೆ. ಇನ್ನೊಂದು ತಾಯಿಯನ್ನು ನೀವು ಮಣಿಪುರದಲ್ಲಿ ಕೊಲೆ ಮಾಡಿದ್ದೀರಿ. ಎಲ್ಲಿಯವರೆಗೆ ನೀವು ಹಿಂಸೆಯನ್ನು ಮಣಿಪುರದಲ್ಲಿ ನಿಲ್ಲಿಸೋದಿಲ್ಲವೋ ಅಲ್ಲಿಯವರೆಗೂ ನೀವು ನನ್ನ ತಾಯಿಯನ್ನು ಹತ್ಯೆ ಮಾಡುತ್ತೀದ್ದೀರಿ ಎಂದುಕೊಳ್ಳುತ್ತೇನೆ. ಭಾರತದ ಸೇನೆ ಮಣಿಪುರದಲ್ಲಿ ಒಂದೇ ದಿನ ಶಾಂತಿ ತರಬಲ್ಲುದು. ನೀವು ಸೇನೆಯನ್ನು ಬಳಸಿಕೊಳ್ಳುತ್ತಿಲ್ಲ. ಯಾಕೆಂದರೆ ನೀವು ಹಿಂದುಸ್ತಾನವನ್ನು ಮಣಿಪುರದಲ್ಲಿ ಸಾಯಿಸಲು ಪ್ರಯತ್ನಿಸುತ್ತಿದ್ದೀರಿ. ದೇಶದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ದನಿಯನ್ನು ಕೇಳುತ್ತಿಲ್ಲ ಎಂದಾದಲ್ಲಿ, ಇನ್ಯಾರ ದನಿಯನ್ನು ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ನಾನು ಮಣಿಪುರಕ್ಕೆ ಹೋಗಿದ್ದೆ, ಇಲ್ಲಿವರೆಗೆ ನಮ್ಮ ಪ್ರಧಾನಿ ಹೋಗಿಲ್ಲ, ಏಕೆಂದರೆ ಅವರಿಗೆ ಮಣಿಪುರ ಭಾರತವಲ್ಲ, ನಾನು ಮಣಿಪುರ ಎಂಬ ಪದವನ್ನು ಬಳಸಿದ್ದೇನೆ ಆದರೆ ಅದು ಮಣಿಪುರವಾಗಿ ಉಳಿದಿಲ್ಲ ಎಂಬುದು ಸತ್ಯ . ನೀವು ಮಣಿಪುರವನ್ನು ಎರಡಾಗಿ ಮಾಡಿದ್ದೀರಿ, ನೀವು ಮಣಿಪುರವನ್ನು ಒಡೆದು ಹಾಕಿದ್ದೀರಿ ಎಂದು ಟೀಕಿಸಿದರು.

ರಾವಣ ಇಬ್ಬರ ಮಾತುಗಳನ್ನು ಕೇಳುತ್ತಿದ್ದ. ಮೇಘನಾಥ ಹಾಗೂ ಕುಂಭಕರ್ಣ. ಅದೇ ರೀತಿ ನರೇಂದ್ರ ಮೋದಿ ಇಬ್ಬರ ಮಾತನ್ನು ಮಾತ್ರವೇ ಕೇಳುತ್ತಾರೆ. ಅವರೆಂದರೆ ಅಮಿತ್‌ ಶಾ ಹಾಗೂ ಗೌತಮ್‌ ಅದಾನಿ. ಲಂಕೆಯನ್ನು ಸುಟ್ಟಿದ್ದು ಹನುಮಂತನಲ್ಲ. ಲಂಕೆಯನ್ನು ಸುಟ್ಟಿದ್ದು ರಾವಣನ ಅಹಂಕಾರ. ರಾಮ ಎಂದೂ ರಾವಣನನ್ನು ಕೊಲ್ಲಲಿಲ್ಲ. ರಾವಣನ ಅಹಂಕಾರವೇ ರಾವಣನನ್ನು ಸಾಯಿಸಿತು ಎಂದು ಹೇಳಿದ್ದಾರೆ.

ಇಂದು ಸರ್ಕಾರ ಇಡೀ ದೇಶದಲ್ಲಿ ಸೀಮೆಎಣ್ಣೆ ಮಾರಾಟ ಮಾಡುತ್ತಿದೆ. ಈಗ ಮಣಿಪುರದಲ್ಲಿ ಸೀಮೆಎಣ್ಣೆ ಹಾಕಿ ಧ್ವಂಸ ಮಾಡಿದ್ದೀರಿ. ಈಗ ಹರಿಯಾಣದಲ್ಲೂ ಬೆಂಕಿ ಹಾಕಿದ್ದೀರಿ. ಇಡೀ ದೇಶವನ್ನು ಸುಡಲು ಪ್ರಯತ್ನ ಮಾಡುತ್ತಿದ್ದೀರಿ’ ಎಂದು ವಾಕ್‌ಪ್ರಹಾರ ಮಾಡಿದರು.

ಭಾರತ್ ಜೋಡೋ ಯಾತ್ರೆ ಕುರಿತು ಮಾತು

ತಮ್ಮ ಭಾರತ್ ಜೋಡೋ ಯಾತ್ರೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡ ರಾಹುಲ್ , ಈ ಪ್ರಯಾಣ ಇನ್ನೂ ಮುಗಿದಿಲ್ಲ. ಅದು ಇನ್ನೂ ಚಾಲನೆಯಲ್ಲಿದೆ ಎಂದು ಅವರು ಹೇಳಿದರು.

ನೀವು ಯಾತ್ರೆಯನ್ನು (ಭಾರತ್ ಜೋಡೋ ಯಾತ್ರೆ) ಏಕೆ ಪ್ರಾರಂಭಿಸಿದ್ದೀರಿ ಎಂದು ಜನರು ನನ್ನನ್ನು ಕೇಳುತ್ತಿದ್ದರು. ನಾನು ಯಾಕೆ ಯಾತ್ರೆ ಆರಂಭಿಸಿದೆ ಎಂಬುದು ನನಗೇ ಗೊತ್ತಿಲ್ಲ. ಆದರೆ ಆ ಪ್ರಯಾಣದಲ್ಲಿ ಜನರ ನೋವು, ಸಂಕಟ, ಸಮಸ್ಯೆಗಳು ನನ್ನದೇ ಸಮಸ್ಯೆಗಳಾದವು. ಯಾತ್ರೆಯ ವೇಳೆ ನನ್ನಲ್ಲಿದ್ದ ಅಹಂಕಾರದ ಭಾವನೆ ಮಾಯವಾಯಿತು.ನಾನು (ಯಾತ್ರೆ) ಪ್ರಾರಂಭಿಸಿದಾಗ, ನಾನು ಪ್ರತಿದಿನ 10 ಕಿಮೀ ಓಡಲು ಸಾಧ್ಯವಾದರೆ 25 ಕಿಮೀ ನಡೆಯುವುದು ದೊಡ್ಡ ವಿಷಯವಲ್ಲ ಎಂಬುದು ನನ್ನ ಮನಸ್ಸಿನಲ್ಲಿತ್ತು, ಇಂದು ನಾನು ಅದನ್ನು ನೋಡಿದಾಗ -ಅದು ದುರಹಂಕಾರವಾಗಿತ್ತು ಎಂಬುದು ಅರ್ಥವಾಗಿದೆ. ಆಗ ನನ್ನ ಹೃದಯದಲ್ಲಿ ದುರಹಂಕಾರವಿತ್ತು .ಆದರೆ ಭಾರತವು ದುರಹಂಕಾರವನ್ನು ಅಳಿಸಿಬಿಡುತ್ತದೆ, ಒಂದು ಸೆಕೆಂಡಿನಲ್ಲಿ ಅದು ಅಳಿಸಿಹಾಕುತ್ತದೆ. ಯಾತ್ರೆಯ 2-3 ದಿನಗಳಲ್ಲಿ ಮೊಣಕಾಲು ನೋಯಲಾರಂಭಿಸಿತು, ಅದು ಹಳೆಯ ಗಾಯವಾಗಿತ್ತು. ಮೊದಲ ದಿನಗಳಲ್ಲಿ ತೋಳ ಇರುವೆ ಆಗಿ ಬಿಟ್ಟಿತು.. ಜೋ ಹಿಂದೂಸ್ತಾನ್ ಕೋ ಅಹಂಕಾರ್ ಸೆ ದೇಖ್ನೆ ನಿಕ್ಲಾ ಥಾ, ವೋ ಪೂರಾ ಕಾ ಪೂರಾ ಅಹಂಕಾರ್ ಗಯಾಬ್ ಹೋ ಗಯಾ.. (ಅಹಂಕಾರದಿಂದ ದೇಶವನ್ನು ಸುತ್ತಲು ಹೋಗಿದ್ದವನ ಎಲ್ಲ ಅಹಂಕಾರ ಇಳಿದು ಹೋಯ್ತು)ಭಾರತ ಜನರ ಧ್ವನಿ. ಈ ಧ್ವನಿಗಳನ್ನು ಆಲಿಸಲು, ನಾವು ನಮ್ಮ ಆಸೆಗಳನ್ನು ತ್ಯಾಗ ಮಾಡಬೇಕು. ನಮ್ಮ ಅಹಂ ಮತ್ತು ದ್ವೇಷವನ್ನು ಬಿಟ್ಟುಬಿಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!