ಸಂಸತ್​​ನಲ್ಲಿ ಫ್ಲೈಯಿಂಗ್‌ ಕಿಸ್‌ ನೀಡಿದ ರಾಹುಲ್‌ ಗಾಂಧಿ: ಕೆಂಡಾಮಂಡಲವಾದ ಸ್ಮೃತಿ ಇರಾನಿ, ಸ್ಪೀಕರ್‌ ಗೆ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಲೋಕಸಭೆಯಲ್ಲಿ ಇಂದು ತಮ್ಮ ಭಾಷಣ ಮುಗಿಸಿ ಲೋಕಸಭೆಯಿಂದ ಹೊರ ನಡೆಯುವ ಮುನ್ನ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ಅವರ ಕಡೆಗೆ ನೋಡುತ್ತಾ ‘ಫ್ಲೈಯಿಂಗ್ ಕಿಸ್’ ನೀಡಿದ್ದಾರೆ ಎಂದು ವರದಿಯಾಗಿದೆ.

ಇದರ ಬೆನ್ನಲ್ಲೇ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ 21 ಮಂದಿ ಮಹಿಳಾ ಸಂಸದರು ಸ್ಪೀಕರ್‌ ಓಂ ಬಿರ್ಲಾಗೆ ಲಿಖಿತ ದೂರು ನೀಡಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಅಸಭ್ಯತೆಯನ್ನು ಸಂಸತ್ತು ಹಿಂದೆಂದೂ ಕಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವಿಶ್ವಾಸ ನಿರ್ಣಯದ ಕುರಿತು ರಾಹುಲ್ ಗಾಂಧಿ ಭಾಷಣ ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಸ್ಮೃತಿ ಇರಾನಿ ಅವರು, ಕೆಲವರ ವರ್ತನೆಯನ್ನು ನಾನು ಆಕ್ಷೇಪಿಸುತ್ತೇನೆ. ನನಗಿಂತ ಮುಂಚೆ ಮಾತನಾಡಿದ ವ್ಯಕ್ತಿ, ಹೊರಡುವ ಮುನ್ನ ಅಸಭ್ಯತೆಯನ್ನು ಪ್ರದರ್ಶಿಸಿದರು. ಸ್ತ್ರೀದ್ವೇಷಿ ಪುರುಷನೊಬ್ಬನಿಂದ ಮಾತ್ರ ಮಹಿಳೆಯರು ಹಾಜರಿರುವ ಸದನಕ್ಕೆ ಫ್ಲೈಯಿಂಗ್ ಕಿಸ್ ಮಾಡಲು ಸಾಧ್ಯ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಮಹಿಳಾ ಸಂಸದೆಯೊಬ್ಬರ ಕಡೆಗೆ ನೋಡುತ್ತಾ ‘ಫ್ಲೈಯಿಂಗ್ ಕಿಸ್’ ಮಾಡುವ ಈ ವರ್ತನೆಗೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಅವರ ಈ ವರ್ತನೆಯನ್ನು ಗಮನಿಸಿದರೆ ಅವರು ಯಾವ ವಂಶದಿಂದ ಬಂದವರು ಅನ್ನೋದು ಗೊತ್ತಾಗುತ್ತದೆ. ಅವರ ಕುಟುಂಬ ಹಾಗೂ ಅವರ ಪಕ್ಷ ಮಹಿಳೆಯರನ್ನು ಯಾವ ರೀತಿ ನೋಡುತ್ತದೆ ಅನ್ನೋದು ರಾಹುಲ್ ಗಾಂಧಿ ಅವರ ವರ್ತನೆಯಿಂದಲೇ ಸಾಬೀತಾಗುತ್ತೆ ಎಂದು ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.

ಈ ಕುರಿತು ಶೋಭಾ ಕರಂದ್ಲಾಜೆ ಮಾತನಾಡಿ, ಸ್ಮೃತಿ ಇರಾನಿ ಮಾತಾಡುವಾಗ ಮಹಿಳಾ ಸಂಸದರತ್ತ ನೋಡಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಈ ಬಗ್ಗೆ ಸ್ಪೀಕರ್ ಗೆ ಬಿಜೆಪಿ ಮಹಿಳಾ ಸಂಸದರು ಸ್ಪೀಕರ್ ಗೆ ದೂರು ನೀಡಿದ್ದೇವೆ. ಸಿಸಿಟಿವಿ ಮತ್ತು ವಿಡಿಯೋಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವತ್ತ ಆಗ್ರಹಿಸಿದ್ದೇವೆ. ಎಂಥ ನಾಯಕರು ಇವರು. ಮಹಿಳಾ ಸಂಸದರು ಇರುವ ಕಡೆ ಈ ರೀತಿ ಮಾಡಿದ್ದಾರೆ . ಎಂಥ ಸಂಸ್ಕೃತಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!