ಕ್ಷಿಪಣಿ, ರಾಕೆಟ್‌ ಉಡಾಯಿಸಿ ಹೊಸ ವರ್ಷ ಸಂಭ್ರಮಿಸಲಿದ್ದಾರೆ ಕಿಮ್‌ ಜಾಂಗ್‌ ಉನ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಕೊರಿಯಾದ ಹುಚ್ಚು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 2022 ರಲ್ಲಿ ದಾಖಲೆಯ ಪ್ರಮಾಣದಲ್ಲಿ ಕ್ಷಿಪಣಿಗಳನ್ನು ಉಡಾಯಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಮಿತಿಗೆ ಒತ್ತಾಯಗಳು ಮತ್ತು ಜಾಗತಿಕ ನಿರ್ಬಂಧಗಳಿಗೆ ಸೊಪ್ಪೇ ಹಾಕದ ಕಿಮ್‌, ಮತ್ತಷ್ಟು ಶಸ್ತ್ರಾಗಳ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಕ್ಷಿಪಣಿ, ರಾಕೆಟ್ ಗಳನ್ನು ಉಡಾಯಿಸುವ ಮೂಲಕ ಹೊಸವರ್ಷವನ್ನು ಸ್ವಾಗತಿಸಲಿದ್ದಾರೆ!.
ಕಿಮ್ ಈ ವಾರ 2023 ಕ್ಕೆ ತನ್ನ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಅವರ ಆಡಳಿತ ಪಕ್ಷ ವರ್ಕರ್ಸ್ ಪಾರ್ಟಿಯು ವರ್ಷಾಂತ್ಯದ ಪ್ರಮುಖ ನೀತಿ-ಹೊಂದಾಣಿಕೆಯ ಸಭೆಯನ್ನು ನಡೆಸುತ್ತಿದೆ. ಉತ್ತರ ಕೊರಿಯಾದ ನಾಯಕ ಮಿಲಿಟರಿಯನ್ನು ಬಲಪಡಿಸುವುದಾಗಿ ಸಭೆಯಲ್ಲಿ ಹೇಳಿದ್ದಾರೆ. ಆದರೆ ಹೊಸ ವರ್ಷದ ದಿನದಂದು ದೇಶದ ಮಾಧ್ಯಮವು ಸಭೆಯ ವರದಿಯನ್ನು ಪ್ರಕಟಿಸುವವರೆಗೆ ಅದರ ವಿವರಗಳು ತಿಳಿಯುವುದಿಲ್ಲ. ಒಟ್ಟಿನಲ್ಲಿ 2023ರಲ್ಲೂ ಹುಚ್ಚುದೊರೆಯ ತಿಕ್ಕಲು ನಿರ್ಧಾಗಳು ಅಲ್ಲೊಲ ಕಲ್ಲೋಲ ಸೃಷ್ಟಿಸುವುದರಲ್ಲಿ ಅಚ್ಚರಿ ಇಲ್ಲ.
ಡ್ರೋನ್‌ಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಕ್ಷಿಪಣಿಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಈಗಾಗಲೇ ಕಿಮ್ ಯೋಜನೆಗಳನ್ನು ರೂಪಿಸಿದ್ದಾರೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ಸೆಟೆದು ನಿಲ್ಲಲು ಪರಮಾಣು ದಾಳಿಯ ಸಾಮರ್ಥ್ಯವನ್ನು ಹೊಂದಲು ಕಿಮ್‌ ಪ್ರಯತ್ನಿಸುತ್ತಿದ್ದಾರೆ.
ಕಿಮ್ ಆಡಳಿತವು 2022 ರಲ್ಲಿ ಇದುವರೆಗೆ ಸುಮಾರು 70 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ವಿಶ್ವಸಂಸ್ಥೆಯ ನಿರ್ಣಯಗಳನ್ನು ಧಿಕ್ಕರಿಸಿದೆ. ಅವರು ದಶಕದ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ವರ್ಷಗಳಿಗಿಂತ ಇದು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಏಷ್ಯಾದಲ್ಲಿ ಅಮೆರಿಕ ಪಡೆಗಳಿಗೆ ಆಶ್ರಯ ನೀಡುವ ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ತಿರುಗೇಟು ನೀಡುವ ಯುದ್ಧತಂತ್ರದ ಭಾಗವಾಗಿ ಕಿಮ್ ಪರಮಾಣು ಪರೀಕ್ಷೆಯನ್ನು ನಡೆಸಲು ಸಿದ್ಧರಾಗಿದ್ದಾರೆ. ಪರಮಾಣು ಆಸ್ಫೋಟನವು ಸಿಡಿತಲೆಯ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವರು ಅಮೆರಿಕದ ಮುಖ್ಯ ಭೂಭಾಗವನ್ನು ಹೊಡೆಯುವ ಸಾಮರ್ಥ್ಯವಿರುವ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗೆ ಜೋಡಿಸಬಹುದು.
ಕಿಮ್ ಪರಮಾಣು ಅಸ್ತ್ರವನ್ನು ಪ್ರಯೋಗಿಸಿದರೆ ಕಠಿಣ, ಸಂಘಟಿತ ಶಿಕ್ಷೆಯನ್ನು ನೀಡಲು ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್ ವಾಗ್ದಾನ ಮಾಡಿವೆ. ಆದರೆ ಹಲವು ವರ್ಷಗಳ ನಿರ್ಬಂಧಗಳು ಮತ್ತು ಪ್ರತ್ಯೇಕತೆಯು ಕಿಮ್ ಅವರ ಮಾರ್ಗವನ್ನು ಬದಲಾಯಿಸಲು ವಿಫಲವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೋ ಅಧಿಕಾರ ಹೊಂದಿರುವ ರಷ್ಯಾ ಅಥವಾ ಚೀನಾ, 2017 ರಲ್ಲಿ ಮಾಡಿದಂತೆ ಉತ್ತರ ಕೊರಿಯಾ ವಿರುದ್ಧ ಯಾವುದೇ ಹೊಸ ಕ್ರಮಗಳನ್ನು ಕೈಗೊಳ್ಳಲು ಬಿಡುವುದಿಲ್ಲ. ಕಿಮ್‌ 2023 ರಲ್ಲಿ ಏನು ಮಾಡಲಿದ್ದಾರೆ ಎಂಬುದಕ್ಕೆ ಹೊಸ ವರ್ಷದ ಮೊದಲ ವಾರದಲ್ಲೇ ಉತ್ತರ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!