ಇವರೇ ನೋಡಿ ರಾಷ್ಟ್ರಧ್ವಜದ ವಿನ್ಯಾಸಕಾರ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌(ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಪಿಂಗಲಿ ವೆಂಕಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತೀಯ ರಾಷ್ಟ್ರೀಯ ತ್ರಿವರ್ಣ ಧ್ವಜದ ವಿನ್ಯಾಸಕಾರರಾಗಿದ್ದರು, ಅವರು ಸ್ವಾತಂತ್ರ್ಯ ಮತ್ತು ಸ್ವತಂತ್ರ ಭಾರತದ ಆತ್ಮಕ್ಕೆ ಸಮಾನಾರ್ಥಕವಾಗದ್ದರು ಎಂದರೆ ಅತಿಶಯೋಕ್ತಿಯಲ್ಲ. ಇಂದು ನಾವು ನೋಡುತ್ತಿರುವ ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದ ಮಹಾನ್ ವ್ಯಕ್ತಿ ಇವರೆ.

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಆಗಸ್ಟ್ 2, 1876 ರಂದು ಜನಿಸಿದ ವೆಂಕಯ್ಯ ಅವರು ಆಫ್ರಿಕಾದಲ್ಲಿ ಆಂಗ್ಲೋ ಬೋಯರ್ ಯುದ್ಧದ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದರು. ಗಾಂಧಿ ತತ್ವಗಳಲ್ಲಿ ದೃಢ ನಂಬಿಕೆಯುಳ್ಳ ಮತ್ತು ಕಟ್ಟಾ ರಾಷ್ಟ್ರೀಯತಾವಾದಿಯಾಗಿದ್ದರು. ವೆಂಕಯ್ಯ ಯುದ್ಧದ ಸಮಯದಲ್ಲಿ ಮಹಾತ್ಮರನ್ನು ಭೇಟಿಯಾದರು. ತಮ್ಮ 19ನೇ ವಯಸ್ಸಿನಲ್ಲಿಯೇ 50 ವರ್ಷಗಳಷ್ಟು ದೀರ್ಘಕಾಲ ಬಾಳಬಲ್ಲ ಸಂಘಟನೆಯೊಂದನ್ನ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಅವರು ವಿಜಯವಾಡದಲ್ಲಿ ಮತ್ತೊಮ್ಮೆ ಮಹಾತ್ಮರನ್ನು ಭೇಟಿಯಾದರು ಮತ್ತು ಧ್ವಜದ ವಿವಿಧ ವಿನ್ಯಾಸಗಳನ್ನು ಅವರಿಗೆ ತೋರಿಸಿದರು. ರಾಷ್ಟ್ರೀಯ ಧ್ವಜದ ಅಗತ್ಯವನ್ನು ಒಪ್ಪಿಕೊಂಡ ಗಾಂಧಿ, 1921 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಹೊಸ ಧ್ವಜವೊಂದನ್ನು ವಿನ್ಯಾಸಗೊಳಿಸಲು ವೆಂಕಯ್ಯನವರಿಗೆ ಹೇಳಿದರು.

ಆರಂಭದಲ್ಲಿ ವೆಂಕಯ್ಯ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಬಳಸಿದ್ದರು. ಆದರೆ ನಂತರ ಅದು ಮಧ್ಯಭಾಗದಲ್ಲಿ ಚರಕ ಮತ್ತು ಬಿಳಿ ಬಣ್ಣದೊಂದಿಗೆ ವಿಕಸನಗೊಂಡಿತು. ಧ್ವಜವನ್ನು ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1931 ರಲ್ಲಿ ಅಂಗೀಕರಿಸಿತು.

2009 ರಲ್ಲಿ, ಅವರ ಸ್ಮರಣಾರ್ಥ ಅಂಚೆಚೀಟಿಯನ್ನು ಸಹ ಬಿಡುಗಡೆ ಮಾಡಲಾಯಿತು ಮತ್ತು ಆಂಧ್ರ ಪ್ರದೇಶ ಸರ್ಕಾರವು 2014 ರಲ್ಲಿ ಅವರ ಹೆಸರನ್ನು ಭಾರತ ರತ್ನಕ್ಕೆ ಶಿಫಾರಸು ಮಾಡಿತು.

2015 ರಲ್ಲಿ, ಆಗಿನ ನಗರಾಭಿವೃದ್ಧಿ ಸಚಿವರಾಗಿದ್ದ ಎಂ. ವೆಂಕಯ್ಯ ನಾಯ್ಡು ಅವರು ಆಲ್‌ ಇಂಡಿಯಾ ರೇಡಿಯೋ ವಿಜಯವಾಡ ಎಂಬ ಹೆಸರನ್ನು ಪಿಂಗಲಿವೆಂಕಯ್ಯನವರ ಹೆಸರಿಗೆ ಮರುನಾಮಕರಣ ಮಾಡಿದರು ಮತ್ತು ಅದರ ಆವರಣದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!