Sunday, June 4, 2023

Latest Posts

ಪಂಜಾಬ್ ಮುಖ್ಯಮಂತ್ರಿಯ ನಡೆ ಸಂಶಯಾಸ್ಪದ: ಕೊಡಗು‌ ಬಿಜೆಪಿ ಕಿಡಿ

ಹೊಸದಿಗಂತ ವರದಿ,ಮಡಿಕೇರಿ:

ಪಂಜಾಬಿನ ಫಿರೋಜ್ ಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಲುವಾಗಿ ಹಾಗೂ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ದೇಶದ‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಗತ್ಯ ಭದ್ರತೆ ನೀಡಲು ವಿಫಲವಾದ ಪಂಜಾಬ್’ನ ಮುಖ್ಯಮಂತ್ರಿಯವರ ನಡೆ ಸಂಶಯಾಸ್ಪದವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಅವರು, ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರಕಾರ ಪ್ರಧಾನಿಯವರಿಗೆ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸದೆ ಸಂವಿಧಾನ ವಿರೋಧಿಯಾಗಿ ವರ್ತಿಸಿ ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಿರುವುದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.
ಕ್ಷಮೆ ಯಾಚಿಸಿ: ಹವಾಮಾನದ ವೈಪರೀತ್ಯದ ಕಾರಣದಿಂದಾಗಿ ಅನಿವಾರ್ಯವಾಗಿ ರಸ್ತೆ ಮೂಲಕ ಹುಸೇನಿವಾಲದ ರಾಷ್ಟ್ರೀಯ ಸ್ಮಾರಕಕ್ಕೆ ತೆರಳುತ್ತಿದ್ದ ಪ್ರಧಾನಿ ಮೋದಿ ಯವರ ಪ್ರಯಾಣಕ್ಕೆ ರೈತ ಪ್ರತಿಭಟನೆಯ ಸೆಪದಲ್ಲಿ ಕೃತಕ ಟ್ರಾಫಿಕ್ ಜಾಮ್ ಸೃಷ್ಟಿಸಿದ ಪರಿಣಾಮವಾಗಿ ಪ್ರಧಾನಿಯವರ ಕಾರು 20 ನಿಮಿಷ ಫ್ಲೈಓವರ್ ಮೇಲೆಯೇ ನಿಲ್ಲುವಂತಾಗಿದೆ. ಆದರೂ ಪ್ರತಿಭಟನಾಕಾರರು ದಾರಿ ಬಿಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತನ್ನೆಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಬಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿರುವುದು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಕರಾಳ ದಿನ. ದೇಶದ ಪ್ರಧಾನಿಗೇ ಭದ್ರತಾ ವೈಫಲ್ಯವಾದರೆ ಇನ್ನು ಜನ ಸಾಮಾನ್ಯರ ಪಾಡೇನು? ಇದಕ್ಕೆ ಮುಖ್ಯ ಹೊಣೆಗಾರರಾಗಿರುವ ಪಂಜಾಬ್ ಮುಖ್ಯಮಂತ್ರಿ, ಭದ್ರತಾ ಮುಖ್ಯಸ್ಥರು ಮತ್ತು ಕೀಳು ರಾಜಕೀಯವನ್ನು ಪ್ರದರ್ಶಿಸಿದ ಕಾಂಗ್ರೆಸ್ ಪಕ್ಷ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಮಹೇಶ್ ಜೈನಿ ಆಗ್ರಹಿಸಿದ್ದಾರೆ.
ತನ್ನ ದೇಶ ವಿರೋಧಿ ಕೃತ್ಯಗಳಿಂದ ದೇಶದೆಲ್ಲೆಡೆ ಜನತೆಯಿಂದ ತಿರಸ್ಕರಿಸಲ್ಪಟ್ಟ ಕಾಂಗ್ರೆಸ್’ನಿಂದ ಇಂತಹ ನೀಚ ಕೃತ್ಯವನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರದ ಕರ್ನಾಟಕದಲ್ಲಿ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಗೂಂಡಾ ವರ್ತನೆ; ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್’ನಲ್ಲಿ ಪ್ರಧಾನ ಮಂತ್ರಿಗೆ ಭದ್ರತಾ ವೈಫಲ್ಯದ ದುರ್ವರ್ತನೆ ಇದು ಕಾಂಗ್ರೆಸ್ ಮನಸ್ಥಿತಿಗೆ ಸಾಕ್ಷಿ ಎಂದು ಅವರು ಟೀಕಿಸಿದ್ದಾರೆ.
‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ದೇಶಕ್ಕೆ ಎಷ್ಟು ಅಪಾಯಕಾರಿಯೋ, ಅಧಿಕಾರ ಕಳೆದುಕೊಂಡಾಗ ಮತ್ತಷ್ಟು ಅಪಾಯಕಾರಿ’ ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಾತನ್ನು ಇಂತಹ ಕುಕೃತ್ಯಗಳ ಮೂಲಕ ಕಾಂಗ್ರೆಸ್ ಸಾಬೀತುಪಡಿಸಿದೆ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿನ ನಾಗಾಲೋಟದಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿನ ಷಡ್ಯಂತ್ರಗಳನ್ನು ಸೂಕ್ಮವಾಗಿ ಗಮನಿಸಿ ಅರ್ಥೈಸಿಕೊಂಡಿರುವ ದೇಶದ ಜನತೆ ದೇಶ ವಿರೋಧಿ ಕಾಂಗ್ರೆಸ್’ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಹೇಶ್ ಜೈನಿ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!