ಹೊಸದಿಗಂತ ವರದಿ,ಮಡಿಕೇರಿ:
ವೀರಾಜಪೇಟೆ ಕ್ಷೇತ್ರದ ಶಾಸಕ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಒಂದು ಕೋಟಿ ರೂ.ಗಳಿಗೆ ಬೇಡಿಕೆ ಇಟ್ಡಿರುವ ಘಟನೆ ನಡೆದಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಸಂಜೆ ವೇಳೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆಮಾಡಿದ ವ್ಯಕ್ತಿ “ತಾವು ಎ.ಸಿ.ಬಿ.ಯವರು, ತಮ್ಮ ಮೇಲೆ ಎ.ಸಿ.ಬಿ ದಾಳಿ ನಡೆಸಲು ಸಜ್ಜಾಗುತ್ತಿದ್ದು, ದಾಳಿಯನ್ನು ತಡೆ ಹಿಡಿಯಲು ಒಂದು ಕೋಟಿ ರೂ ನೀಡಬೇಕು” ಎಂದು ಬೇಡಿಕೆ ಇಟ್ಟಿರುವುದಾಗಿ ಹೇಳಲಾಗಿದೆ. ಅಲ್ಲದೆ ಎರಡನೇ ಬಾರಿಗೆ ಮತ್ತೊಂದು ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ಈ ಬಗ್ಗೆ ಯಾವ ತೀರ್ಮಾನ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿರುವುದಾಗಿ ಬೋಪಯ್ಯ ತಿಳಿಸಿದ್ದಾರೆ. ತಾನು ಎಸಿಬಿ ತನಿಖೆ ಎದುರಿಸಲು ಸಿದ್ಧವಿರುವುದಾಗಿ ಬೋಪಯ್ಯ ಹೇಳಿದಾಗ ಆತ ಕರೆ ಸ್ಥಗಿತಗೊಳಿಸಿದ್ದು, ಆ ಸಂಖ್ಯೆಗೆ ಬೇರೆ ಮೊಬೈಲ್’ನಿಂದ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿಲ್ಲ ಎಂದೂ ಹೇಳಲಾಗಿದೆ.
ತಕ್ಷಣವೇ ಈ ಕುರಿತು ಪೊಲೀಸ್ ಮಹಾ ನಿರ್ದೇಶಕರಿಗೆ ದೂರವಾಣಿ ಮೂಲಕ ಬೋಪಯ್ಯ ಮಾಹಿತಿ ನೀಡಿದ್ದು, ಝಹೀಬ್ ಎಂಬಾತನಿಗೆ ಸೇರಿದ ಸಿಮ್’ನಿಂದ ಆಂಧ್ರಪ್ರದೇಶದಿಂದ ಈ ಕರೆ ಬಂದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿನಗರ ಠಾಣೆಗೂ ದೂರು ನೀಡಲಾಗಿದ್ದು, ಅಚ್ಚ ಕನ್ನಡದಲ್ಲಿ ಮಾತನಾಡಿರುವ ಈ ವ್ಯಕ್ತಿ ಕರ್ನಾಟಕದವನೇ ಇರಬಹುದೆಂದು ಅಂದಾಜಿಸಲಾಗಿದೆ. ತನಿಖೆ ಮುಂದುವರಿದಿದೆ.