ಕೊಡಗು ಸೈನಿಕ ಶಾಲೆಯ ಸಭೆ: ಹೆಣ್ಣು ಮಕ್ಕಳ ವಸತಿ ಗೃಹ ನಿರ್ಮಾಣ ಸಹಿತ ಅಭಿವೃದ್ಧಿ ಪರ ಚರ್ಚೆ

ಹೊಸದಿಗಂತ ವರದಿ, ಮಡಿಕೇರಿ:

ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ 23ನೇ ಸ್ಥಳೀಯ ಆಡಳಿತ ಮಂಡಳಿ ಸಭೆ ಭಾರತೀಯ ವಾಯುಸೇನೆಯ ತರಬೇತಿ(ಆಡಳಿತ) ವಿಭಾಗದ ಹಿರಿಯ ಮುಖ್ಯಸ್ಥ ಹಾಗೂ ಕೊಡಗು ಸೈನಿಕ ಶಾಲೆಯ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಏರ್ ವೈಸ್ ಮಾರ್ಷಲ್ ಪಿ.ಜೆ.ವಾಲಿಯಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಶಾಲೆಯಲ್ಲಿ ಹೆಣ್ಣು ಮಕ್ಕಳ ವಸತಿ ಗೃಹ ಮತ್ತು ನಡೆದ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ನಡೆಯ ಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯ ಸದಸ್ಯ ಕಾರ್ಯದರ್ಶಿ ಹಾಗೂ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್‍ ಅವರು ಶಾಲೆಯ ತರಬೇತಿ ಹಾಗೂ ಆಡಳಿತವನ್ನು ಕುರಿತು ವಿವರಿಸುವುದರೊಂದಿಗೆ, ಕಳೆದ ಒಂಭತ್ತು ತಿಂಗಳಿನಲ್ಲಿ ಶಾಲೆಯು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಹಾಗೆಯೇ ಈ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸುವುದರೊಂದಿಗೆ, ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು
ಕಾರ್ಯಕ್ರಮದ ಮೊದಲಿಗೆ ಶಾಲೆಯ ಅಶ್ವದಳದ ಮೂಲಕ ಮುಖ್ಯ ಅತಿಥಿಯವರನ್ನು ಸ್ವಾಗತಿಸಲಾಯಿತು.
ನಂತರ ಮುಖ್ಯ ಅತಿಥಿಗಳು ಶಾಲಾ ಆವರಣದಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವುದರ ಮೂಲಕ ಗೌರವ ಸಮರ್ಪಿಸಿದರು.
ಸಭೆ ಮುಗಿದ ನಂತರ ಸ್ಥಳೀಯ ಆಡಳಿತ ಮಂಡಳಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯ ಅತಿಥಿಗಳಿಗೆ ಮತ್ತು ಸದಸ್ಯರಿಗೆ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್‍ ಅವರು ಶಾಲೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸಭೆಯಲ್ಲಿ ಪ್ರಸ್ತುತ ಕಮಾಂಡ್ ಎಜುಕೇಷನ್ ಆಫೀಸರ್, ಬೆಂಗಳೂರು ಮತ್ತು ಸೈನಿಕ ಶಾಲೆ ಕೊಡಗಿನ ಮಾಜಿ ಪ್ರಾಂಶುಪಾಲರೂ ಆದ ಗ್ರೂಪ್ ಕ್ಯಾಪ್ಟನ್ ಆರ್.ಆರ್.ಲಾಲ್, ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್, ಶಾಲಾ ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆರ್.ಕೆ.ಡೇ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಪ್ರಸಾದ್ ವಿ, ಮೈಸೂರು ವಿಶ್ವ ವಿದ್ಯಾನಿಲಯದ ಉಪ ಕುಲಸಚಿವ ಪ್ರೊ ಶಿವಪ್ಪ, ಸಿ ಪಿ ಡಬ್ಲ್ಯೂ ಡಿ ಮೈಸೂರು ವಿಭಾಗದ ಕಾರ್ಯನಿರ್ವಹಣಾ ಅಭಿಯಂತರ ವಿಜಯಕುಮಾರ್ ಸ್ವರ್ಣಕಾರ್, ಕುಶಾಲನಗರದ ಸಹಾಯಕ ಅಭಿಯಂತರ ಕೆ.ಎಸ್ ರಮೇಶ್, ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿಗಳು, ಶಿಕ್ಷಕ-ಪೋಷಕರ ಪ್ರತಿನಿಧಿಯಾದ ಪ್ರಕಾಶ್ ಕೃಷ್ಣ ಭಟ್ಟ ಜೋಷಿ ಹಾಜರಿದ್ದರು.
ನಂತರ ಸಂಜೆ 12ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸ್ನೇಹ ಸೌಹಾರ್ದತೆಯ ಸಲುವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಯಿತು.ಮಕ್ಕಳ ಜೊತೆಗೆ ಏರ್ ವೈಸ್ ಮಾರ್ಷಲ್ ಪಿ ಜೆ ವಾಲಿಯಾ ಅವರೂ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!