ಕೊಡಗು: ಬಿಡುವು ನೀಡಿದ ಮಳೆ-12ದಿನಗಳ ಬಳಿಕ ಇಣುಕಿದ ಸೂರ್ಯ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಮಂಗಳವಾರ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದು, ಜನ ಹಾಗೂ ಜಾನುವಾರುಗಳು ಬಿಸಿಲು ಕಾಣುವಂತಾಗಿದೆ.
ಮಂಗಳವಾರ ಬೆಳಗಿನಿಂದ ಜಿಲ್ಲೆಯಲ್ಲಿ ಬಿಸಿಲು- ಮಳೆಯ ಕಣ್ಣಾಮುಚ್ಚಾಲೆ ಆರಂಭವಾಗಿದ್ದು, ಕಳೆದ‌ 10 ದಿನಗಳಿಂದ ಬಿಸಿಲು ಕಾಣದಿದ್ದ ಕೊಡಗಿನಲ್ಲಿ ಮಂಗಳವಾರ ಮೋಡದ ನಡುವೆ ಸೂರ್ಯ ಇಣುಕಿದ್ದಾನೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 72.68 ಮಿ.ಮೀ, ವೀರಾಜಪೇಟೆ ತಾಲೂಕಿನಲ್ಲಿ 45.85 ಮಿ.ಮೀ, ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 99.57 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ ಮಳೆ 72.70 ಮಿ.ಮೀ. ಮಳೆಯಾಗಿದೆ.
ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ ತಾಲ್ಲೂಕಿನಲ್ಲಿ 2046.16 ಮಿ.ಮೀ, (ಕಳೆದ ವರ್ಷ ಇದೇ ಅವಧಿಯಲ್ಲಿ 1502.15 ಮಿ.ಮೀ.) ವೀರಾಜಪೇಟೆ ತಾಲೂಕಿನಲ್ಲಿ 1106.32 ಮಿ.ಮೀ. (878.31 ಮಿ.ಮೀ.)ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 1110.81 ಮಿ.ಮೀ. (ಕಳೆದ ವರ್ಷ ಇದೇ ಅವಧಿಯಲ್ಲಿ 676.85) ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ‌ 1421.09 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1019.10 ಮಿ.ಮೀ ಮಳೆಯಾಗಿತ್ತು.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 74.20, ನಾಪೋಕ್ಲು 59, ಸಂಪಾಜೆ 64.50, ಭಾಗಮಂಡಲ 93, ವೀರಾಜಪೇಟೆ ಕಸಬಾ 54.40, ಹುದಿಕೇರಿ 74.80, ಶ್ರೀಮಂಗಲ 96.40, ಪೊನ್ನಂಪೇಟೆ 21, ಅಮ್ಮತ್ತಿ 8.50, ಬಾಳೆಲೆ 20, ಸೋಮವಾರಪೇಟೆ ಕಸಬಾ 116.40 ಶನಿವಾರಸಂತೆ 68, ಶಾಂತಳ್ಳಿ 227, ಕೊಡ್ಲಿಪೇಟೆ 58.80, ಕುಶಾಲನಗರ 53, ಸುಂಟಿಕೊಪ್ಪ 74.20 ಮಿ.ಮೀ. ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಮಂಗಳವಾರ ನೀರಿನ ಮಟ್ಡವನ್ನು 2853.59 ಅಡಿಗಳಿಗೆ ಕಾಯ್ದಿರಿಸಿಕೊಂಡು ಜಲಾಶಯದಿಂದ ನದಿಗೆ 18,645 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 2845.36 ಅಡಿಗಳಾಗಿದ್ದರೆ, ಜಲಾಶಯಕ್ಕೆ 3564 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಆದರೆ ಈ ವರ್ಷ ಪ್ರಸಕ್ತ 18,251 ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!