ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸಿದ ಶಿವಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಕೋರ್ ಕಮಿಟಿ ನಿರ್ಧರಿಸಿದೆ ಎಂದು ಪಕ್ಷದ ನಾಯಕ ಸಂಜಯ್ ರಾವತ್ ಸೋಮವಾರ ಹೇಳಿದ್ದಾರೆ.

ದ್ರೌಪದಿ ಮುರ್ಮು ಅವರಿಗೆ ಬೆಂಬಲಿಸಿದ ಮಾತ್ರಕ್ಕೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ ಎಂದರ್ಥವಲ್ಲ ಎಂದೂ ಕೂಡ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮುಂಬೈನ ತಮ್ಮ ನಿವಾಸದಲ್ಲಿ ಉದ್ಧವ್ ಠಾಕ್ರೆ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಶಿವಸೇನೆಯ ಹಲವಾರು ಸಂಸದರು ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿ ಹಾಗೂ ಏಕನಾಥ್‌ ಶಿಂಧೆ ಬಣದೊಂದಿಗೆ ಮುರಿದು ಹೋಗಿರುವ ಸಂಬಂಧವನ್ನು ಪುನಃ ಸರಿಪಡಿಸಲು ಪ್ರಯತ್ನಿಸುವಂತೆ ಠಾಕ್ರೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಪಕ್ಷ ತನ್ನ ಬೆಂಬಲವನ್ನು ನೀಡಬೇಕು ಎಂದು ಶಿವಸೇನೆಯ ಒಟ್ಟು 16 ಸಂಸದರು ಹೇಳಿದ್ದಾರೆ.

ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ರಾಷ್ಟ್ರಪತಿ ಚುನಾವಣೆಗೆ ಯಾವುದೇ ವಿಪ್ ಇಲ್ಲ ಮತ್ತು ಸಂಸದರು ತಮ್ಮ ಇಚ್ಛೆಯಂತೆ ಮತ ಚಲಾಯಿಸಬಹುದು. ಶಿವಸೇನಾ ಸಂಸದ ಗಜಾನನ್ ಕೀರ್ತಿಕರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಆಗಿರುವುದರಿಂದ ಶಿವಸೇನೆ ಮುರ್ಮು ಅವರಿಗೆ ಬೆಂಬಲ ನೀಡಲು ಪಕ್ಷದ 16 ಸಂಸದರು ಒಪ್ಪಿಕೊಂಡಿದ್ದಾರೆ ಎಂದಿರುವ ಕುರಿತು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!