ಕೊಡಗು: ಪಠ್ಯ ವಿಚಾರದ ಬಗ್ಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಸಮಾಧಾನ

 ಹೊಸದಿಗಂತ ವರದಿ, ಸೋಮವಾರಪೇಟೆ 
9 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಭಾಗ -1 ರಲ್ಲಿ ಬಸವಣ್ಣನವರ ಪಾಠದಲ್ಲಿ ಕೆಲ ಅಂಶ ತೆಗೆದು ಅವರ ವಿಚಾರಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿರುವ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಅವರು,ಈ ಬಗ್ಗೆ ತುರ್ತಾಗಿ ಕ್ರಮಕೈಗೊಂಡು ಸರಿಪಡಿಸದಿದ್ದಲ್ಲಿ ಹೋರಾಟ ನಡೆಸಬೇಕಾಗುತದೆ ಎಂದು ಎಚ್ಚರಿಕೆ ನೀಡಿದ್ದಾರೆ.
9ನೇ ತರಗತಿಯ ‘ಸಮಾಜ ವಿಜ್ಞಾನ’ ಪಠ್ಯಪುಸ್ತಕ ಭಾಗ-1 ರಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ. ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ. ವೈದಿಕ ಮೂಲ ಧರ್ಮದಲ್ಲಿ ಬೇರೂರಿದ್ದ ಅಸಂಖ್ಯ ಧಾರ್ಮಿಕ ಆಚರಣಾ ವಿಧಿ ವಿಧಾನಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯ ಆಧಾರಿತ ಸರಳ ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಶರಣರು ಪ್ರಚಾರಪಡಿಸಿದರು. ಬಸವಣ್ಣ ಜಾತಿ ವ್ಯವಸ್ಥೆಯ ಕಡು ವಿರೋಧಿಯಾಗಿದ್ದರು. ಆದರೆ ಪಠ್ಯದಲ್ಲಿ ಬಸವಣ್ಣನವರು ಉಪನಯನ ಸ್ವೀಕರಿಸಿದರು‌ ಎಂದು ಇದೆ .ಬಸವಣ್ಣನವರು ತನ್ನ ಅಕ್ಕನಿಗೆ ಇಲ್ಲದ ಉಪನಯನ ತನಗೇಕೆ ಎಂದು ಉಪನಯವನ್ನು ಧಿಕ್ಕರಿಸಿದ್ದರು ಎಂದು ಮಹೇಶ್ ಅವರು ತಮ್ಮ‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಸವಣ್ಣನವರು ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದರು ಎಂಬುದು ತಪ್ಪುಮಾಹಿತಿ. ಬಸವಣ್ಣನವರು ಇಷ್ಟಲಿಂಗದ ಪ್ರವರ್ತಕರು. ಇಷ್ಟಲಿಂಗ ಪೂಜಾ ಪದ್ಧತಿಯನ್ನು ಜಗತ್ತಿಗೆ ಅನಾವರಣಗೊಳಿಸಿದ್ದು, ಪರಿಚಯಗೊಳಿಸಿದ್ದೆ ಬಸವಣ್ಣನವರು. ಹೀಗೆ ಹಲವಾರು ತಪ್ಪು ಮಾಹಿತಿಗಳು ಪಠ್ಯದಲ್ಲಿದೆ. ಆದುದರಿಂದ ತಕ್ಷಣ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿರುವ ಅವರು ಇಲ್ಲವಾದಲ್ಲಿ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಈ ಬಗ್ಗೆ ಕೂಡಲೇ ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಬಹುದು ಎಂದು ಎಸ್.ಮಹೇಶ್ ಎಚ್ಚರಿಸಿದ್ದಾರೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!