ಕುವೈತ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿ ಕೊಡಗಿನ ಮಹಿಳೆ: ರಕ್ಷಣೆಗೆ ಮುಂದಾದ ಜಿಲ್ಲಾಡಳಿತ

ಹೊಸದಿಗಂತ ವರದಿ ಮಡಿಕೇರಿ:

ಕೆಲಸಕ್ಕೆಂದು ಕೇರಳಕ್ಕೆ ತೆರಳಿದ ಮಹಿಳೆಯೊಬ್ಬರು ಇದೀಗ ಕುವೈತ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಆಕೆಯ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ.
ಸಿದ್ದಾಪುರದ ಕರಡಿಗೋಡು ನಿವಾಸಿ ಚೆಕ್ಕಿ ಎಂಬವರ ಪುತ್ರಿ ಪಾರ್ವತಿ ಎಂಬಾಕೆಯೇ ಕುವೈತ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಹಿಳೆಯಾಗಿದ್ದು, ಏಜೆಂಟನೊಬ್ಬ ಮಾಡಿದ ವಂಚನೆಯಿಂದ‌ ಇದೀಗ ಆಕೆಗೆ ಈ ಸ್ಥಿತಿ ಉಂಟಾಗಿರುವುದಾಗಿ ಹೇಳಲಾಗಿದೆ.

ಪತಿ ತೊರೆದು ಹೋದ ಹಿನ್ನೆಲೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿಯೊಂದಿಗೆ ಕರಡಿಗೋಡು ಗ್ರಾಮದ ಲೈನ್ ಮನೆಯೊಂದರಲ್ಲಿ ವಾಸವಿದ್ದ ಪಾರ್ವತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಬಳಿಕ ಮೂರು ವರ್ಷಗಳ ಹಿಂದೆ ಕೇರಳದ ತಲಚೇರಿಯ ಮನೆಯೊಂದರಲ್ಲಿ ಮನೆ ಕೆಲಸಕ್ಕಾಗಿ ಪಾರ್ವತಿ ನೇಮಕಗೊಂಡಿದ್ದು, ತಾಯಿ ಚೆಕ್ಕಿಯೊಂದಿಗೆ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ತೆರಳಿದ್ದರು.
ಇತ್ತೀಚೆಗೆ ಮಹಿಳೆಯೊಬ್ಬಳ ಮೂಲಕ ಊಟಿಯ ಏಜೆಂಟ್ ಒಬ್ಬನ ಪರಿಚಯವಾಗಿದ್ದು, ಕುವೈತ್‌ನಲ್ಲಿ ಮನೆ ಕೆಲಸ ಕೊಡಿಸುವುದಾಗಿ ಆತ ನಂಬಿಸಿದ್ದ. ಏಜೆಂಟ್ ನೀಡಿದ ಪಾಸ್‌ಪೋರ್ಟ್ ಮತ್ತು ವೀಸಾದ ಮೂಲಕ ಕುವೈತ್’ನ ಮನೆಯೊಂದಕ್ಕೆ ಸೇರಿಕೊಂಡ ಪಾರ್ವತಿ ಮೂರು ತಿಂಗಳಿನಿಂದ ಮನೆ ಕೆಲಸದಾಕೆಯಾಗಿ ದುಡಿಯುತ್ತಿದ್ದರು.

ಆದರೆ ವಿಸಿಟಿಂಗ್ ವೀಸಾದ ಅವಧಿ ಮೂರು ತಿಂಗಳಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅದರ ಅರಿವಿಲ್ಲದ ಪಾರ್ವತಿ ಇದೀಗ ಕೆಲಸವಿಲ್ಲದೆ ಯಾವುದೋ ಒಂದು ಸ್ಥಳದಲ್ಲಿ ಅತಂತ್ರವಾಗಿರುವುದಾಗಿ ಹೇಳಲಾಗಿದೆ. ವಿಸಿಟಿಂಗ್ ವೀಸಾದ ಅವಧಿಯ ಕುರಿತು ತಿಳಿಸದೆ ವಂಚಿಸಿರುವ ಏಜೆಂಟ್ ಪಾರ್ವತಿಯನ್ನು ಕೆಲಸಕ್ಕೆ ಸೇರಿಸಿದ ಮನೆಯ ಮಾಲೀಕರಿಂದ ಹಣ ಪಡೆದಿರುವುದಾಗಿಯೂ ತಿಳಿದು ಬಂದಿದೆ.

ಈ ಬಗ್ಗೆ ಕಳೆದ ವಾರ ತನ್ನ ತಾಯಿ ಎಂ.ಚೆಕ್ಕಿ ಅವರಿಗೆ ಪಾರ್ವತಿ ಕರೆ ಮಾಡಿ ತಿಳಿಸಿದ್ದು, ಇದರಿಂದ ಆತಂಕಗೊoಡ ಚೆಕ್ಕಿ ಪುತ್ರಿಯನ್ನು ಮರಳಿ ಕರೆ ತರಲು ಸಹಾಯ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ ಪಾರ್ವತಿಯನ್ನು ಕರೆ ತರಲು ಅಗತ್ಯ ಕ್ರಮ ಕೈಗೊಂಡಿದೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಸಂತ್ರಸ್ತೆಯೊಂದಿಗೆ ಸಂವಹನ ಸಾಧಿಸಿ, ಆಕೆಗೆ ಧೈರ್ಯ ತುಂಬಿದ್ದು, ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಾರ್ವತಿಯನ್ನು ಕ್ಷೇಮವಾಗಿ ಕುಟುಂಬದೊಡನೆ ಸೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!