Wednesday, March 29, 2023

Latest Posts

ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋದ ಮಹಾನಿರ್ದೇಶಕರಾಗಿ ಕೊಡಗಿನ ಐ.ಬಿ.ಉತ್ತಯ್ಯ ನೇಮಕ

ಹೊಸದಿಗಂತ ವರದಿ ಮಡಿಕೇರಿ:

ಭಾರತೀಯ ನೌಕಾಪಡೆಯಲ್ಲಿ ರಿಯಲ್ ಅಡ್ಮಿರಲ್ ಆಗಿ ಕರ್ತವ್ಯದಲ್ಲಿರುವ ಕೊಡಗಿನ ಅಧಿಕಾರಿ ಐಚೆಟ್ಟಿರ ಬಿ.ಉತ್ತಯ್ಯ ಅವರು ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿಗೆ ನಿಯೋಜಿತರಾಗಿದ್ದಾರೆ.
ಐ.ಬಿ.ಉತ್ತಯ್ಯ (ವಿ.ಎಸ್.ಎಂ, ಎ.ವಿ.ಎಸ್.ಎಂ) ಅವರು ಇದೀಗ ನವದೆಹಲಿಯ ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋದ ಮಹಾನಿರ್ದೇಶಕ (ಡಿ.ಜಿ.)ರಾಗಿ ನೇಮಕಗೊಂಡಿದ್ದಾರೆ.

ಕಳೆದ ಹಲವು ಸಮಯದಿಂದ ವಿಶಾಖಪಟ್ಟಣದ ನೌಕಾನೆಲೆಯಲ್ಲಿ ರಿಯಲ್ ಅಡ್ಮಿರಲ್ ಸ್ಥಾನದೊಂದಿಗೆ ಎಡ್ಮಿರಲ್ ಸೂಪರಿಂಟೆಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಇದೀಗ ರಿಯಲ್ ಅಡ್ಮಿರಲ್ ಬಿಮಲ್ ಕುಮಾರನ್ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.

ಉತ್ತಯ್ಯ ಅವರು ಭಾರತೀಯ ನೌಕಾಪಡೆಗೆ 1987ರಲ್ಲಿ ಸೇರ್ಪಡೆಗೊಂಡಿದ್ದು, ಲೋನಾವರದ ಐ.ಎನ್.ಎಸ್.ಶಿವಾಜಿ ನೌಕಾ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಎಂ.ಟೆಕ್, ಎಂಪಿಲ್ ಪದವಿ ಪಡೆದಿದ್ದಾರೆ. ತಮ್ಮ 35 ವರ್ಷಗಳ ಸೇವಾವಧಿಯಲ್ಲಿ ವಿವಿಧ ಜವಾಬ್ದಾರಿಯುತ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಉತ್ತಯ್ಯ ಅವರು, ಕಾರವಾರದ ನೌಕಾನೆಲೆಯ ತಾಂತ್ರಿಕ ಹೆಚ್ಚುವರಿ ಮಹಾ ನಿರ್ದೇಶಕರಾಗಿ, ವಿಶಾಖಪಟ್ಟಣದ ನೌಕಾನೆಲೆಯ ಎಡ್ಮಿರಲ್ ಸೂಪರಿಂಟೆಂಡೆಂಟ್ ಆಗಿ ಪೂರ್ವ ನೌಕಾನೆಲೆಯ ಮುಖ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರು ಮೂಲತಃ ಕೊಡಗಿನ ಮಕ್ಕಂದೂರಿನವರಾಗಿದ್ದು, ಐಚೆಟ್ಟಿರ ದಿ.ಬೆಳ್ಯಪ್ಪ ಹಾಗೂ ಲಲಿತ ಬೆಳ್ಯಪ್ಪ (ತಾಮನೆ : ಚೆಪ್ಪುಡಿರ) ಅವರ ಪುತ್ರರಾಗಿದ್ದಾರೆ. ಇವರು ಭಾರತೀಯ ನೌಕಾಪಡೆಯಲ್ಲಿನ ಮೂರನೇ ರ್‍ಯಾಂಕ್’ನ ಸ್ಥಾನದಲ್ಲಿರುವ ಕೊಡಗು ಜಿಲ್ಲೆಯ ಏಕೈಕ ಅಧಿಕಾರಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!