ಕೊಡಗಿನ‌ ಸ್ನೇಹಿತರನ್ನೂ ರಕ್ಷಿಸಿ ತಾಯ್ನಾಡಿಗೆ ಕಳುಹಿಸಿದ್ದ ನವೀನ್!

ಹೊಸದಿಗಂತ ವರದಿ, ಮಡಿಕೇರಿ:

ಉಕ್ರೇನ್’ನಲ್ಲಿ ರಷ್ಯಾ ಶೆಲ್ ದಾಳಿಗೆ ಸಿಲುಕಿ ಸಾವನ್ನಪ್ಪಿದ ಹಾವೇರಿಯ ನವೀನ್ ಗ್ಯಾನಗೌಡರ್, ತನ್ನ ಸಾವಿಗೂ ಮುನ್ನ ಹಲವರ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಸಾವಿಗೂ ಮುನ್ನ ಯುದ್ಧ ಭೂಮಿಯಲ್ಲಿ ಅವರು ಮಾಡಿರುವ ಸಹಾಯಗಳನ್ನು ನೆನೆದು ಕೊಡಗಿನ ಅವರ ಸ್ನೇಹಿತರು ಕಣ್ಣೀರಾಗುತ್ತಾರೆ.
ಹೌದು, ಅವರು ತಮ್ಮ ಸ್ನೇಹಿತರ ರಕ್ಷಣೆಗಾಗಿ ರಾತ್ರಿಯಿಡೀ ಕಣ್ಣು ಬಿಟ್ಟು ಕಾದಿದ್ದಾರೆ. ಜಾಕೆಟ್​​ ಹಾಕಿರದ ಕಾರಣ ಸ್ನೇಹಿತನನ್ನು ಮರಳಿ ಬಂಕರ್​ಗೆ ಕಳುಹಿಸಿ ಆತನ ಪ್ರಾಣ ಉಳಿಸಿದ್ದಾರೆ. ತನ್ನೊಂದಿಗಿದ್ದ ಕರ್ನಾಟಕದ ಸ್ನೇಹಿತರನ್ನು ತಾಯ್ನಾಡಿಗೆ ಕಳುಹಿಸಿ ತಾನು‌ ಪ್ರಾಣಾರ್ಪಣೆ‌ ಮಾಡಿದ್ದಾರೆ!
ಕೊಡಗಿನ ಕುಶಾಲನಗರ ತಾಲೂಕಿನ ಕೂಡ್ಲೂರಿನ ಕೆ.ಕೆ. ಮಂಜುನಾಥ್ ಕುಮಾರ್ ಅವರ ಪುತ್ರ ಚಂದನ್ ಗೌಡ ಹಾಗೂ ಮುಳ್ಳುಸೋಗೆಯ ಲಿಖಿತ್ ಕೊರಗಪ್ಪ ಅವರುಗಳು ನವೀನ್ ಅವರ ಮಾನವೀಯ ಮುಖವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಫೆಬ್ರವರಿ 24 ರಂದು ಉಕ್ರೇನಿನಲ್ಲಿ ಯುದ್ಧ ಆರಂಭವಾಗಿತ್ತು. ಆ ದಿನದಿಂದ ನಾಲ್ಕು ದಿನಗಳ ಕಾಲ ಕೊಡಗಿನ ಕೂಡ್ಲೂರಿನ ಚಂದನ್, ಮುಳ್ಳುಸೋಗೆ ಗ್ರಾಮದ ಲಿಖಿತ್ ಎಲ್ಲರೂ ಒಟ್ಟಿಗೆ ಒಂದೇ ಬಂಕರ್’ನಲ್ಲಿ ರಕ್ಷಣೆ ಪಡೆದಿದ್ದರು. ಇಲ್ಲೇ ನವೀನ್​ ಕೂಡಾ ಇದ್ದರು.
ಬಂಕರ್ ಚಿಕ್ಕದಾಗಿದ್ದರಿಂದ ಉಳಿದ ಸ್ನೇಹಿತರನ್ನು ಮಲಗಿಸಿ ತಾನು ಎಚ್ಚರವಾಗಿರುತ್ತೇನೆ ಎಂದು ನವೀನ್ ಕುಳಿತುಕೊಳ್ಳುತ್ತಿದ್ದರಂತೆ. ಅಷ್ಟೇ ಅಲ್ಲ ಅಡುಗೆಯ ವಿಷಯದಲ್ಲೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಓದುವ ವಿಷಯದಲ್ಲೂ ಇವರಿಗೆಲ್ಲಾ ನವೀನ್ ತುಂಬಾ ಸಹಾಯ ಮಾಡುತ್ತಿದ್ದರೆಂದು ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.
ಖಾರ್ಕಿವ್ ನಗರದ ಮೇಲೆ ರಷ್ಯಾ ಯುದ್ಧ ತೀವ್ರಗೊಂಡಂತೆಲ್ಲಾ ಇವರಿಗೆ ಅನ್ನ ನೀರಿಗೂ ಹಾಹಾಕಾರ ಎದುರಾಗಿ ಕೊನೆಗೆ ಹೇಗಾದರೂ ಸರಿ ಎಲ್ಲರೂ ಉಕ್ರೇನ್’ನಿಂದ ಭಾರತಕ್ಕೆ ತಲುಪಲೇಬೆಕೆಂಬ ನಿರ್ಧಾರಕ್ಕೆ ಬಂದಿದ್ದರು.
ಸ್ನೇಹಿತರನ್ನು ಕ್ಯಾಬ್ ಹತ್ತಿಸಿ ತಾನು ಸತ್ತ: ಕೊನೆಗೂ ಚಂದನ್, ಲಿಖಿತ್ ಸೇರಿದಂತೆ ಐದು ಜನರ ತಂಡ ನಡೆದುಕೊಂಡೇ ಖಾರ್ಕಿವ್ ನಗರದಿಂದ ಹೊರಡಲು ನಿರ್ಧರಿಸಿತ್ತು. ಒಂದೇ ಬಂಕರ್’ನಲ್ಲಿದ್ದ ಚಂದನ್, ಲಿಖಿತ್ ಸೇರಿದಂತೆ ಐವರನ್ನು ನವೀನ್ ಬೆಳಗ್ಗೆ ಬೇಗನೇ ಎಬ್ಬಿಸಿ ಸಿದ್ಧವಾಗುವಂತೆ ತಿಳಿಸಿದ್ದರು. ಐವರ ತಂಡ ಸಿದ್ಧವಾದ ಬಳಿಕ ತುಂಬಾ ದೂರದವರೆಗೆ ನಡೆದು ಬಳಿಕ ಕ್ಯಾಬ್ ಹತ್ತಿಸಿದ್ದರು. ಅಲ್ಲಿಂದ ರೈಲು ಏರಿ ಐವರ ತಂಡ ಪೋಲೆಂಡ್ ದೇಶದತ್ತ ಹೊರಟಿದ್ದರು.
ಅತ್ತ ಸ್ನೇಹಿತರನ್ನು ಕಳುಹಿಸಿದ್ದ ನವೀನ್ ತಾನು ಆಹಾರ ತರಲೆಂದು ಅಂಗಡಿಯತ್ತ ಹೆಜ್ಜೆ ಹಾಕಿದ್ದರು. ವಿಧಿಯಾಟ ಅದೇನಿತ್ತೋ ರಷ್ಯಾದ ಸೈನಿಕರು ಹಾರಿಸಿದ ಶೆಲ್ ಹಾರಿ ಬಂದು ಬ್ಲಾಸ್ಟ್ ಆಗಿತ್ತು. ಪರಿಣಾಮ ನವೀನ್ ಅವರ ಪ್ರಾಣಪಕ್ಷಿ ಸ್ಥಳದಲ್ಲಿಯೇ ಹಾರಿಹೋಗಿತ್ತು.
‘ನಾವು ಸೇಫಾಗಿ ಪೋಲೆಂಡಿನತ್ತ ಸಾಗುತ್ತಿದ್ದೇವೆ. ನೀವೂ ಬರುವುದಕ್ಕೆ ಪ್ರಯತ್ನಿಸಿ’ ಎಂದು ಹೇಳಲು ನವೀನ್ ಫೋನಿಗೆ ಕರೆ ಮಾಡಿದ್ದ ಚಂದನ್ ಮತ್ತು ಸ್ನೇಹಿತರಿಗೆ ಅಪಘಾತದ ವಿಷಯ ಕೇಳಿಸಿತು. ‘ನವೀನ್ ಇನ್ನಿಲ್ಲ’ ಎಂಬ ಧ್ವನಿ ಕೇಳಿ ನಮಗೆ ನಂಬಲು ಆಗಲೇ ಇಲ್ಲ. ಕೊನೆಗೆ ವಿಡಿಯೋ ಕಾಲ್ ಮಾಡಿ ನೋಡಿದಾಗ ನವೀನ್ ಮೃತಪಟ್ಟಿರುವುದು ಖಚಿತವಾಯಿತು ಎಂದು ಚಂದನ್ ಗೌಡ ಕಣ್ಣೀರಾದರು.
ನಂಬಲಾಗುತ್ತಿಲ್ಲ: ‘ನಮಗೆ ಬೆಂಬಲವಾಗಿ ನಿಂತಿದ್ದ, ಒಳ್ಳೆಯ ಮಾನವೀಯತೆ ಹೊಂದಿದ್ದ ಓರ್ವ ಗೆಳೆಯ ನವೀನ್ ಮೃತಪಟ್ಟಿರುವುದನ್ನು ಈಗಲೂ ನಮಗೆ ನಂಬಲಾಗುತ್ತಿಲ್ಲ. ಸ್ನೇಹಿತರನ್ನೆಲ್ಲಾ ತಾಯ್ನಾಡಿನತ್ತ ಕಳುಹಿಸಿದ ನವೀನ್ ತಾನು ಅಲ್ಲೇ ಪ್ರಾಣ ಬಿಟ್ಟಿದ್ದು ಮಾತ್ರ ಅತ್ಯಂತ ನೋವಿನ ಸಂಗತಿ ಎನ್ನುತ್ತಾರೆ ಅವರ ಸ್ನೇಹಿತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!