ಯುದ್ಧ ಭೂಮಿಯಲ್ಲಿ ಜೀವದ ಹಂಗು ತೊರೆದು ಒಂದು ವಾರ ನಡೆದ ಕೊಡಗಿನ ಕುವರಿ!

ಹೊಸದಿಗಂತ ವರದಿ, ಮಡಿಕೇರಿ:

ಉಕ್ರೇನ್-ರಷ್ಯಾ ನಡುವೆ ಯುದ್ಧ ಆರಂಭವಾದ ದಿನದಿಂದ ಜೀವದ ಹಂಗು ತೊರೆದು ನಡೆಯಲಾರಂಭಿಸಿದ ಕೊಡಗಿನ ಯುವತಿಯೊಬ್ಬರು ಕೊನೆಗೂ ತಾಯ್ನಾಡಿಗೆ ತಲುಪಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೊಡಗಿನ ಪೊನ್ನಂಪೇಟೆಯ ಕೃಷ್ಣ ಕಾಲೋನಿ ನಿವಾಸಿ ಅನ್ನಮ್ಮ ಅವರ ಪುತ್ರಿ ವಿ.ಜೆ.ಸಿನ್ಯಾ ಎಂಬಾಕೆಯೇ ಹೈ ರಿಸ್ಕ್ ತೆಗೆದುಕೊಂಡು‌ ಉಕ್ರೇನ್’ನಿಂದ ಮರಳಿದ ವಿದ್ಯಾರ್ಥಿನಿ.
ಯುದ್ಧದ ಮುನ್ಸೂಚನೆ ದೊರೆತ ಕೂಡಲೇ ಫೆ.24ರಂದು ಭಾರತಕ್ಕೆ ಹೊರಡಲು ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದೆ. ಆದರೆ ತಾನು ಹೊರಡಬೇಕಿದ್ದ ದಿನವೇ ಯುದ್ಧ ಆರಂಭವಾಗಿ ಬಿಟ್ಟಿತ್ತು. ಹೀಗಾಗಿ ಫ್ಲೈಟ್ ಕ್ಯಾನ್ಸಲ್ ಅದರೂ ಭಾರತಕ್ಕೆ ಬರಬೇಕೆಂದು ಫೆ.24 ರಂದೇ ನಡೆಯುವುದಕ್ಕೆ ಆರಂಭಿಸಿದೆ.
ಕಣ್ಮುಂದೆಯೇ ಬಾಂಬ್ ಬ್ಲಾಸ್ಟ್: ನಮ್ಮ ಕಣ್ಮುಂದೆ ಬಾಂಬ್ ಬ್ಲಾಸ್ಟ್ ಆಗುತ್ತಿದ್ದವು. ಅದನ್ನು ನೋಡಿ ನೋಡಿ ಭಯ ಇಲ್ಲದಂತಾಗಿತ್ತಾದರೂ, ಜೀವದ ಮೇಲಿನ ಆಸೆ ಬಿಟ್ಟಿದ್ದೆ. ರೈಲ್ವೆ ನಿಲ್ದಾಣದವರೆಗೆ ನಡೆದರೆ ಅಲ್ಲಿ ರೈಲು ಹತ್ತುವುದಕ್ಕೂ ಬಿಡುತ್ತಿರಲಿಲ್ಲ. ಅಲ್ಲಿಂದ ಪುನಃ ವಾಪಸ್ ಕಾಲೇಜು ಹಾಸ್ಟೆಲ್’ಗೆ ಹೋಗೋಣವೆಂದು ಹೊರಟರೆ ಅಷ್ಟರಲ್ಲೇ ಎಲ್ಲೋ ಬಾಂಬ್ ಸ್ಫೋಟ ಮತ್ತು ಫೈರಿಂಗ್ ಶುರುವಾಗಿ ಬಿಟ್ಟಿರುತಿತ್ತು. ಹೀಗಾಗಿ ಅಲ್ಲೆಲ್ಲಿಯೋ ಬಂಕರ್ ಸಿಕ್ಕರೆ ಅದರಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದೆ. ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ ಎನ್ನುವಾಗ ಮತ್ತೆ ಐದು ಐದು ಜನರ ತಂಡವಾಗಿ ನಡೆಯಲು ಆರಂಭಿಸುತ್ತಿದ್ದೆವು ಎಂದು ಸಿನ್ಯಾ ತಮ್ಮ ರೋಚಕ‌ ಅನುಭವ ಬಿಚ್ಚಿಟ್ಟರು.
ಅಂದಿನಿಂದ ಮಾರ್ಚ್ 3 ವರೆಗೆ ನಡೆದುಕೊಂಡೇ ಉಕ್ರೇನ್‍ನ ಗಡಿ ತಲುಪಿದೆವು.ಕೀವ್’ನಿಂದ ಹುಷ್ಗುರೋ ಯುನಿವರ್ಸಿಟಿರೆಗೆ ನಡೆದೇ ಸಾಗಿ ಕೊನೆಗೂ ಹಂಗೇರಿ ತಲುಪಿದಾಗ ಇಂಡಿಯನ್ ರಾಯಭಾರಿ ಕಚೇರಿ ಸಹಾಯ ಮಾಡಿತು. ಅದಕ್ಕಾಗಿ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಿನ್ಯಾ ತಮ್ಮ ಭಯಾನಕ‌ ಪ್ರಯಾಣದ ಅನುಭವ ಬಿಚ್ಚಿಟ್ಟರು.
ಬದುಕುವ ವಿಶ್ವಾಸ ಉಡುಗಿತ್ತು: ‘ಉಕ್ರೇನ್‍ನಲ್ಲಿ ನಮ್ಮ ವಸತಿ ಪ್ರದೇಶದಲ್ಲಿದ್ದಾಗ ನಮ್ಮ ಕಣ್ಣ ಮುಂದೆಯೇ ಯುದ್ಧ ನಡೆಯುತ್ತಿತ್ತು. ಬಾಂಬ್ ದಾಳಿ, ಸೈರನ್ ಶಬ್ದಗಳನ್ನು ಕೇಳುವಾಗ ಬದುಕುವ ವಿಶ್ವಾಸ ಕಳೆದುಕೊಂಡಿದ್ದೆ. ಅದರೆ ದೇವರ ದಯೆಯಿಂದ ಬದುಕಿ ಬಂದಿದ್ದೇನೆ. ನಮ್ಮ ದೇಶದ ಪ್ರಧಾನಿ ಮೋದಿ ಹಾಗೂ ರಾಯಭಾರಿ ಕಚೇರಿಯ ಆಧಿಕಾರಿಗಳು ಸಾಕಷ್ಟು ಸಹಾಯ ಮಾಡಿದ್ದಾರೆ. ಆದರೆ ಯುದ್ಧ ಸನ್ನಿವೇಶ ನನ್ನ ಕಣ್ಣ ಮುಂದೆ ಹಾಗೆ ಇದೆ. ಈಗಲೂ ನಾನು ಸಣ್ಣ ಶಬ್ಧ ಕೇಳಿದರೆ ಬೆಚ್ಚಿಬೀಳುತ್ತೇನೆ. ಅಷ್ಟು ಭಯ ನನಗೆ ಕಾಡಿದೆ ಎನ್ನುತ್ತಾರೆ ಸಿನ್ಯಾ.
ನಾನು ಕೊಡಗಿನಲ್ಲಿದ್ದಾಗ ಅಷ್ಟು ದೂರ ನಡೆಯುವುದಕ್ಕೂ ಯೋಚನೆ ಮಾಡುತ್ತಿದ್ದೆ, ಆದರೆ ಇದೀಗ, ಅಷ್ಟು ದೂರ ಹೇಗೆ ನಡೆದೆ ಎಂದು ಮನೆಗೆ ಬಂದ‌ ಮೇಲೂ ಯೋಚನೆ ಮಾಡುತ್ತಿದ್ದೇನೆ ಎಂದು ಅವರು ನುಡಿದರು.
ವಿಶ್ಬಾಸ ಬಂದಿದೆ: ಇದೀಗ ನನ್ನ ಮೇಲೆ ನನಗೆ ವಿಶ್ವಾಸ ಬಂದಿದೆ. ಯಾವುದೇ ಕಷ್ಟ ಬಂದರೂ ಎದುಸಿರುವ ಶಕ್ತಿ ಈ ಯುದ್ಧದ ಸನ್ನಿವೇಶದಿಂದ ಕಲಿತಿದ್ದೇನೆ ಎಂದು ತಿಳಿಸಿದರು.
ಎಲ್ಲರೂ ಶೀಘ್ರ ಬರಲಿ: ಸೀನ್ಯಾ ಅವರ ತಾಯಿ ಅನ್ಮಮ್ಮ ಮಾತನಾಡಿ, ಮಗಳು ಉಕ್ರೇನ್‍ನಲ್ಲಿ ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡು ನಮ್ಮ ಮಗಳು ಬದುಕಿ ಬರುತ್ತಾಳೆನ್ನುವ ಆತ್ಮವಿಶ್ವಾಸ ಕಳೆದುಕೊಂಡಿದ್ದೆ. ಆದರೆ ದೇವರು ನಮ್ಮ ಮಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ನಮಗೆ ಅದೇ ಸ್ವಲ್ಪ ಖುಷಿಯ ವಿಚಾರ. ಆದರೆ ಕನ್ನಡಿಗ ನವೀನ್ ಮೃತ ಪಟ್ಟಿದ್ದು, ಈಗಲೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಆದಷ್ಟು ಬೇಗ ವಾಪಸ್ ಬಂದರೆ ಸಾಕು. ನಾವು ದೇವರಲ್ಲಿ ಅದನ್ನೇ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!