ಹೊಸದಿಗಂತ ವರದಿ ಮಡಿಕೇರಿ:
ಪತ್ರಕರ್ತ ಬಾಚರಣಿಯಂಡ ಅನುಕಾರ್ಯಪ್ಪ ಅವರು ಬರೆದಿರುವ ‘ಕೊಡವ ಕೌಟುಂಬಿಕ ಹಾಕಿ ಉತ್ಸವ’ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ‘ಕೃಷ್ಣ’ ದಲ್ಲಿ ನಡೆದ ಪುಸ್ತಕ ಬಿಡುಗಡೆಯ ಸರಳ ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.
1997 ರಲ್ಲಿ ಪಾಂಡಂಡ ಕುಟ್ಟಪ್ಪ ಅವರು ಆರಂಭ ಮಾಡಿರುವ ಕೊಡವ ಹಾಕಿ ಪಂದ್ಯಾವಳಿ 2018 ರವರೆಗೆ ನಡೆದು ಬಂದ ಹಾದಿಯನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಇದೀಗ 2023 ರಲ್ಲಿ ಹಾಕಿ ಹಬ್ಬ ನಡೆಸಲಿರುವ ಅಪ್ಪಚಟ್ಟೋಳಂಡ ಕುಟುಂಬದವರ ಹಾಗೂ ಮುಂದಿನ ವರ್ಷ ಪಂದ್ಯಾವಳಿ ನಡೆಸಲಿರುವ ಕುಂಡ್ಯೋಳಂಡ ಕುಟುಂಬದ ಪರಿಚಯ ಈ ಪುಸ್ತಕದಲ್ಲಿ ಅಡಕವಾಗಿದೆ.
ಇನ್ನು, ಕೊಡಗಿನಲ್ಲಿ 18 ಹಾಕಿ ಒಲಂಪಿಯನ್’ಗಳಿದ್ದು ಅವರನ್ನು ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಪುಸ್ತಕದ ಮುನ್ನುಡಿಯನ್ನು ಒಲಂಪಿಯನ್ ಅಂಜಪರವಂಡ ಸುಬ್ಬಯ್ಯ ಬರೆದಿದ್ದಾರೆ.