ಜುಲೈ ಅಂತ್ಯಕ್ಕೆ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಪೂರ್ಣ

ಮಡಿಕೇರಿ: ಇಲ್ಲಿನ ಕೆ.ಬಾಡಗದಲ್ಲಿ ನಿರ್ಮಿಸಲಾಗುತ್ತಿರುವ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿಯನ್ನು ಜುಲೈ ಅಂತ್ಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಹೆರಿಟೇಜ್ ಸೆಂಟರ್ ಕಾಮಗಾರಿಯ ಪ್ರಗತಿ, ಅನುದಾನ ಬಿಡುಗಡೆ ಮತ್ತು ವಿಳಂಬಕ್ಕೆ ಕಾರಣಗಳ ಕುರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸರಕಾರದ ಗಮನಸೆಳೆದರು. ಕಳೆದ 3 ವರ್ಷಗಳಿಂದ ಇದೇ ಪ್ರಶ್ನೆಯನ್ನು ಸದನದಲ್ಲಿ ಕೇಳುತ್ತಿದ್ದೇನೆ. ಅಧಿಕಾರಿಗಳು ಅದೇ ಉತ್ತರವನ್ನು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಯೋಜನೆಯನ್ನು 2004ರಲ್ಲಿ ಕೇಂದ್ರ ಸರಕಾರ ಮಂಜೂರು ಮಾಡಿದೆ. 2013ರಲ್ಲಿ ಕಾಮಗಾರಿ ಆರಂಭಿಸಿ ₹ 268 ಲಕ್ಷಗಳನ್ನು ಯೋಜನೆಗೆ ಬಳಸಿದ್ದು, ಈ ಪೈಕಿ ₹ 170 ಲಕ್ಷಗಳನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಸರಿಯಾಗಿ ನಡೆಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಅವರಿಂದಲೇ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಯೋಜನೆಯಲ್ಲಿ ₹ 2 ಕೋಟಿ ವ್ಯರ್ಥವಾಗಿ ಪೋಲಾಗಿದೆ. ಏಕೆ ಹೀಗಾಗಿದೆ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಪ್ರವಾಸೋದ್ಯಮ ಸಚಿವರು ಕೊಡಗಿಗೆ ಬಂದು ಇದನ್ನು ಪರಿಶೀಲಿಸಲಿ ಎಂದು ಆಗ್ರಹಿಸಿದರು. ಕೊಡಗು ಪುಟ್ಟ ಜಿಲ್ಲೆ ಎಂದು ಯಾವ ಸರಕಾರವೂ ದೊಡ್ಡ ಮೊತ್ತದ ಅನುದಾನ ನೀಡಿಲ್ಲ. ನೀಡಿದ ಅನುದಾನ ಕೂಡ ಸಮರ್ಪಕ ರೀತಿಯಲ್ಲಿ ವಿನಿಯೋಗ ಆಗುತ್ತಿಲ್ಲ ಎಂದು ಸರಕಾರದ ಗಮನ ಸೆಳೆದರು.

ಈ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸದನಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದರು. ಹೆರಿಟೇಜ್ ಸೆಂಟರ್ ಕಾಮಗಾರಿಗೆ 27-05-2020ರಲ್ಲಿ ₹ 268 ಲಕ್ಷಗಳಿಗೆ ಅನುಮೋದನೆ ನೀಡಿರುವುದನ್ನು ಮಾರ್ಪಡಿಸಿ ಕಾಮಗಾರಿಯನ್ನು ಪರಿಷ್ಕೃತ ₹ 3,30,45,110 ಅಂದಾಜು ಮೊತ್ತದಲ್ಕಿ ಕೈಗೊಳ್ಳಲು ಸಲ್ಲಿಸಿರುವ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಗಿದೆ. 2020-21ರಲ್ಲಿ ಲಾಕ್‍ಡೌನ್ ಹಾಗೂ ಮಳೆಗಾಲವಿದ್ದ ಕಾರಣ ಕಾಮಗಾರಿ ವಿಳಂಬವಾಗಿದೆ. ಪ್ರಸ್ತುತ ಭೌತಿಕ ಕಾಮಗಾರಿ ಪೂರ್ಣಗೊಂಡಿರುತ್ತದೆ. ಅನುಷ್ಠಾನ ಸಂಸ್ಥೆಯಿಂದ ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸಚಿವ ಆನಂದ್ ಸಿಂಗ್ ಉತ್ತರಿಸಿದ್ದರು.

ಆದರೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಸದನಕ್ಕೆ ಉತ್ತರಿಸಿದ ಇಂಧನ ಸಚಿವ ಸುನೀಲ್ ಕುಮಾರ್, ಕೊಡಗಿನ ಬಗ್ಗೆ ಸರಕಾರಕ್ಕೆ ಗೌರವವಿದೆ. ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿಯನ್ನು ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಮಧ್ಯ ಪ್ರವೇಶಿಸಿದ ವೀಣಾ ಅಚ್ಚಯ್ಯ, ಕೊಡಗಿನಲ್ಲಿ ಈಗಾಗಲೆ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಕಾಮಗಾರಿ ಪೂರೈಸುವುದು ಸಾಧ್ಯವಿಲ್ಲ. ಬೇಕಾದರೆ ಮುಂದಿನ ವರ್ಷ ಕಾಮಗಾರಿ ಪೂರೈಸುವುದಾಗಿ ಹೇಳಿ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಟಾಂಗ್ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್ ಇದೇ ಜುಲೈನಲ್ಲಿ ಕಾಮಗಾರಿ ಪೂರ್ಣ ಮಾಡುತ್ತೇವೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಕಾಮಗಾರಿ ಉದ್ಘಾಟನೆಗೆ ನಿಮ್ಮನ್ನೂ ಆಹ್ವಾನಿಸುವುದಾಗಿ ಹೇಳಿದರು.

ಕಾಮಗಾರಿ ವಿಳಂಬ
ಹೆರಿಟೇಜ್ ಕಟ್ಟಡ ಕಾಮಗಾರಿಯ ವಿಳಂಬದ ಕುರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಅಸಮಾಧಾನಕ್ಕೆ ನನ್ನ ಸಹಮತವಿದೆ ಎಂದು ಒಪ್ಪಿಕೊಂಡ ಸಚಿವ ಸುನೀಲ್ ಕುಮಾರ್, ಕೆ.ಬಾಡಗದಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಿಸಲು ಉದ್ದೇಶಿಸಿ 2004ರಲ್ಲಿ ಕೇಂದ್ರ ಸರಕಾರ ₹ 88 ಲಕ್ಷ ಮಂಜೂರು ಮಾಡಿತ್ತು. ಆದರೆ ಜಾಗ ದೊರೆತಿರಲಿಲ್ಲ. ಬಳಿಕ 2010ರಲ್ಲಿ 5 ಎಕರೆ ಜಾಗ ಮಂಜೂರಾತಿ ಮಾಡಲಾಗಿತ್ತಾದರೂ ಯೋಜನೆಗೆ ಹಣ ಸಾಲದಾಗಿತ್ತು. ತದನಂತರ 2018ರಲ್ಲಿ ಪರಿಷ್ಕೃತ ಅಂದಾಜು ಸಲ್ಲಿಸಲಾಗಿತ್ತು. ಈ ನಡುವೆ ಗುತ್ತಿಗೆದಾರ ಕಾಮಗಾರಿ ಪೂರೈಸದ ಹಿನ್ನೆಲೆಯಲ್ಲಿ 2018ರಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಅತೀವ ಮಳೆ, ಕೋವಿಡ್ ಮತ್ತಿತರ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ ಎಂದು ಸದನಕ್ಕೆ ವಿವರಿಸಿದರು.
ಕೊಡಗಿನ ಬಗ್ಗೆ ಸರಕಾರಕ್ಕೆ ಗೌರವವಿದೆ. ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಚೆನ್ನಾಗಿ ಆಗಬೇಕು. ದೇಶದ ಎಲ್ಲೆಡೆಗಳಿಂದ ಪ್ರವಾಸಿಗರು ಇಲ್ಲಿಗೆ ಬರಬೇಕು. ಕೊಡಗಿನ ಹಾಕಿ ಪಟುಗಳು ಮತ್ತು ಸೈನಿಕರ ಬಗ್ಗೆ ಗೌರವವಿದೆ ಎಂದು ಹೇಳಿದರಲ್ಲದೆ, ಜುಲೈ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಚಿವ ಸುನೀಲ್ ಕುಮಾರ್ ಸದನಕ್ಕೆ ವಿವರಿಸಿದರು.

ಈಗ ಹೇಗಿದೆ ಕೊಡವ ಹೆರಿಟೇಜ್ ಸೆಂಟರ್?
ಹೆರಿಟೇಜ್ ಸೆಂಟರ್‌ ಕಾಮಗಾರಿಯಲ್ಲಿ 2 ಐನ್ ಮನೆಗಳ ಮೇಲ್ಛಾವಣಿ ಕೆಲಸ, ಪ್ರವೇಶ ದ್ವಾರ, ಅಡುಗೆ ಕೊಠಡಿ, ಮೆಟ್ಟಿಲುಗಳು, ಆಂಪಿಕ್ ಥಿಯೇಟರ್, ಗ್ರಂಥಾಲಯ, ವಿದ್ಯುದ್ದೀಕರಣ, ಕಿಟಕಿ ಬಾಗಿಲುಗಳ ಜೋಡಣೆ ಕೆಲಸ ಪೂರ್ಣಗೊಂಡಿದೆ. ಹೊಸದಾಗಿ 25 ಕೆ.ವಿ. ಟ್ರಾನ್ಸ್ ಫಾರ್ಮರ್ ಅಳವಡಿಕೆ ಕೆಲಸವೂ ಪೂರ್ಣವಾಗಿದೆ. ಸದರಿ ಕಾಮಗಾರಿಗೆ ₹ 47.91 ಲಕ್ಷಗಳ ಅನುದಾನ ಬಿಡುಗಡೆ ಮಾಡಬೇಕಿದೆ. ಕಾಮಗಾರಿಗೆ 5ನೇ ಕಂತಾಗಿ ಬಿಡುಗಡೆ ಮಾಡಿರುವ ₹ 29 ಲಕ್ಷಗಳಿಗೆ ಹಣ ಬಳಕೆ ಪ್ರಮಾಣ ಪತ್ರ, ಛಾಯಾಚಿತ್ರ, 3ನೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಗುಣ ಪರಿಶೀಲನಾ ವರದಿ, ಶಾಸನ ಬದ್ಧ ಕಟಾವಣೆಗಳ ವಿವರ, ಹಾಗೂ ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಿದ ನಂತರ ಬಾಕಿ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!