ಗಣಪತಿ ಬೀದಿ ರಸ್ತೆ ಕಾಮಗಾರಿ: ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟ ಕಾಂಗ್ರೆಸ್

ಮಡಿಕೇರಿ: ನಗರದ ಗಣಪತಿ ಬೀದಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಮಾ.29 ರಂದು ನಡೆಸಲುದ್ದೇಶಿಸಿದ್ದ ಪ್ರತಿಭಟನೆಯನ್ನು ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಕೈಬಿಟ್ಟಿದೆ.

ನಗರಸಭಾ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸೂಕ್ತ ಕ್ರಮದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದು, ಮುಂದಿನ 15 ದಿನಗಳಲ್ಲಿ ಕಾಮಗಾರಿ ಚುರುಕುಗೊಳ್ಳದಿದ್ದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಎಚ್ಚರಿಸಿದ್ದಾರೆ.

ಅಧ್ಯಕ್ಷರು ಹಾಗೂ ಪೌರಾಯುಕ್ತರು ಕಾಮಗಾರಿ ಕುರಿತು ನಮ್ಮೊಂದಿಗೆ ಚರ್ಚಿಸಿದ್ದಾರೆ. ರಸ್ತೆಯಲ್ಲಿರುವ ಹಳೆಯ 7 ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಮಾ.29ರಿಂದಲೇ ಆರಂಭಗೊಳ್ಳಲಿದೆ. ಮುಂದಿನ ಒಂದು ತಿಂಗಳೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಪ್ರತಿಭಟನೆ ನಡೆಸದಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟಿದ್ದೇವೆ, ಮತ್ತೆ ನಿರ್ಲಕ್ಷ್ಯ ತೋರಿದರೆ 15 ದಿನಗಳ ನಂತರ ಅಹೋರಾತ್ರಿ ಧರಣಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಶಾಸಕರು ಮಧ್ಯಪ್ರವೇಶಿಸಲಿ: ಕೆಲವು ತಾಂತ್ರಿಕ ಅಡಚಣೆಗಳಿರುವ ಬಗ್ಗೆ ಮತ್ತು ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಬೇಕಾಗಿದೆ ಎನ್ನುವ ಮಾಹಿತಿ ನಮಗೆ ಲಭಿಸಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮಡಿಕೇರಿ ಕ್ಷೇತ್ರದ ಶಾಸಕರು ಮಧ್ಯ ಪ್ರವೇಶ ಮಾಡಬೇಕೆಂದು ಪೀಟರ್ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ: ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಗಣಪತಿ ಬೀದಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆನ್ನುವ ಉದ್ದೇಶ ನಮಗೂ ಇದೆ. ಈ ಕುರಿತು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಇದೆ ಎಂದರು.
ಹಳೆಯ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಮಂಗಳವಾರದಿಂದಲೇ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಪೌರಾಯುಕ್ತ ರಾಮದಾಸ್ ಅವರು ಮಾತನಾಡಿ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್’ಗಳನ್ನು ನೀಡಲಾಗಿದೆ. ಹಳೆಯ ಬಿಲ್’ಗಳ ಹಣ ಬಿಡುಗಡೆಯಾಗದೆ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಗುತ್ತಿಗೆದಾರರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದರು.

ಕಾಮಗಾರಿ ಗುತ್ತಿಗೆ ಪಡೆದ ನಂತರ ಪೂರ್ಣಗೊಳಿಸುವುದು ಅವರ ಕರ್ತವ್ಯವಾಗಿದೆ. ಹಳೆಯ ಬಾಕಿ ಹಣ ಬಿಡುಗಡೆ ಸರ್ಕಾರದ ಮಟ್ಟದಿಂದ ಆಗಬೇಕಾಗಿದ್ದು, ಗುತ್ತಿಗೆದಾರರೇ ಪ್ರಯತ್ನ ನಡೆಸಬೇಕು. ಮಳೆಗಾಲ ಆರಂಭವಾಗುವುದರಿಂದ ಒಂದು ತಿಂಗಳೊಳಗೆ ಗಣಪತಿ ಬೀದಿ ಕಾಮಗಾರಿ ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!