October 14, 2026
Wednesday, October 14, 2026
spot_img

ಕೋಡಿಶ್ರೀಗಳ ಹೊಸ ಭವಿಷ್ಯ: ರಾಜ್ಯಕ್ಕೆ ಅಕಾಲಿಕ ಜಲಕಂಟಕ, ಮಹಾನಗರಗಳಿಗೆ ಕಾದಿದೆ ಭಾರೀ ಆಪತ್ತು!

ಹೊಸದಿಗಂತ ಡಿಒಜಿಟಲ್‌ ಡೆಸ್ಕ್:

ತಮ್ಮ ನಿಖರ ಭವಿಷ್ಯವಾಣಿಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಹಾಸನ ಜಿಲ್ಲೆಯ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ಮತ್ತು ದೇಶದ ಭವಿಷ್ಯದ ಕುರಿತು ಮತ್ತೊಂದು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ. ಸೊರಬ ತಾಲ್ಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪ್ರಕೃತಿ ವಿಕೋಪ ಮತ್ತು ರಾಜಕೀಯ ತಲ್ಲಣಗಳ ಕುರಿತು ಆತಂಕಕಾರಿ ನುಡಿಗಳನ್ನು ಹಂಚಿಕೊಂಡಿದ್ದಾರೆ.

ದೇಶದಲ್ಲಿ ಸಕಾಲಿಕವಾಗಿ ಮಳೆಯಾಗದೆ ಹೋದರೂ, ಅಕಾಲಿಕವಾಗಿ ಸುರಿಯುವ ಭಾರಿ ಮಳೆಯಿಂದಾಗಿ ಜಲಕಂಟಕ ಎದುರಾಗಲಿದೆ. ಮಳೆ, ಗುಡುಗು ಮತ್ತು ಸಿಡಿಲಿನ ಆರ್ಭಟ ಹೆಚ್ಚಾಗಲಿದ್ದು, ಅನಿರೀಕ್ಷಿತ ಸಮಯದಲ್ಲಿ ಸುರಿಯುವ ಈ ಮಳೆಯು ಕೃಷಿ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಒಟ್ಟಾರೆಯಾಗಿ ಮಳೆ ಮತ್ತು ಬೆಳೆ ಉತ್ತಮವಾಗಿರಲಿದೆ ಎಂಬ ಆಶಾದಾಯಕ ಮಾತು ನಿಜವಾದರೂ, ಕೆಲವು ಆಕಸ್ಮಿಕ ಘಟನೆಗಳು ಆತಂಕ ಮೂಡಿಸಲಿವೆ. ವಿಶೇಷವಾಗಿ ದೊಡ್ಡ ದೊಡ್ಡ ಮಹಾನಗರಗಳು ಪ್ರಕೃತಿ ವಿಕೋಪ ಅಥವಾ ಆಕಸ್ಮಿಕ ಅನಾಹುತಗಳಿಂದ ದೊಡ್ಡ ಆಪತ್ತನ್ನು ಎದುರಿಸಲಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ 2026 ರ ವರ್ಷದಲ್ಲಿ ಕಷ್ಟಗಳು 10 ಪಟ್ಟು ಹೆಚ್ಚಾಗಲಿವೆ. ಜಗತ್ತಿನ ಶೇ. 8 ರಿಂದ 10 ರಷ್ಟು ಭಾಗ ಮುಳುಗಡೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಹಾಗೂ ನೀರು, ಬೆಂಕಿ ಹಾಗೂ ಹವಾಮಾನ ವೈಪರೀತ್ಯದಂತಹ ಪ್ರಾಕೃತಿಕ ದೋಷಗಳಿಂದ ಜಗತ್ತಿನಾದ್ಯಂತ ಸಾವು-ನೋವು ಹಾಗೂ ದುಃಖ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ.

ಇನ್ನು, ರಾಜ್ಯ ಮತ್ತು ದೇಶದ ರಾಜಕಾರಣದ ಕುರಿತು ಕೇಳಲಾದ ಪ್ರಶ್ನೆಗಳಿಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದ ಶ್ರೀಗಳು, ಅರಸನ ಅರಮನೆ ಕಳೆಗುಂದಿತು ಮತ್ತು ಪಟ್ಟದ ಆನೆ ಗಾಂಭೀರ್ಯದಿಂದ ನಡೆದೀತು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಶ್ರೀಗಳ ಈ ನುಡಿಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಅಧಿಕಾರ ಕೇಂದ್ರಗಳಲ್ಲಿ ದೊಡ್ಡ ಬದಲಾವಣೆ ಅಥವಾ ಪ್ರಸ್ತುತ ಪ್ರಭಾವಿ ವ್ಯಕ್ತಿಗಳ ವರ್ಚಸ್ಸಿನಲ್ಲಿ ಏರುಪೇರಾಗುವ ಮುನ್ಸೂಚನೆಯನ್ನು ಈ ಸಾಲುಗಳು ನೀಡುತ್ತಿವೆ. ಪಟ್ಟದ ಆನೆಯ ಗಾಂಭೀರ್ಯದ ನಡಿಗೆಯು ಹೊಸ ನಾಯಕತ್ವದ ಉದಯ ಅಥವಾ ವ್ಯವಸ್ಥೆಯಲ್ಲಿ ಸ್ಥಿರತೆ ಬರುವುದನ್ನು ಸೂಚಿಸುತ್ತಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಡಿ.ಕೆ. ಶಿವಕುಮಾರ್ ಅವರ ಸಿಎಂ ಆಗುವ ಕನಸಿಗೆ ಪರೋಕ್ಷ ಮುನ್ಸೂಚನೆಯೇ ಎಂಬ ಚರ್ಚೆ ಇದೀಗ ಆರಂಭವಾಗಿದೆ.

Must Read