ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ದಿನಗಳ ಹಿಂದಷ್ಟೇ ಸರ್ಕಾರಿ ವೈದ್ಯರು ಪ್ರತಿಭಟನೆ, ಮುಷ್ಕರ ನಡೆಸಿದ್ದರು. ಇದೀಗ ಖಾಸಗಿ ಆಸ್ಪತ್ರೆಗಳ ವೈದ್ಯರ ಸರದಿ. ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ. ಆದರೆ ಈ ಬಾರಿಯ ಕಾರಣ ಮಾತ್ರ ಬೇರೆ! ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಮತ್ತು ಪ್ರತಿಭಟಿಸಿ ಕರ್ನಾಟಕದಾದ್ಯಂತ ಶನಿವಾರ ಹೊರರೋಗಿ ಸೇವೆ ವಿಭಾಗ (ಒಪಿಡಿ) ಬಂದ್ ಮಾಡುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಮಧ್ಯೆ, ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ವೈದ್ಯರ ಮುಷ್ಕರದ ಕಾರಣ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಸಂಭ್ರಮ ಮನೆ ಮಾಡಿದ್ದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಕೊಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಖಂಡಿಸಿ ಮೈಸೂರಿನ ಕೆಆರ್ ಆಸ್ಪತ್ರೆ ಮುಂಭಾಗ ಕೈಗೆ ಕಪ್ಪು ಪಟ್ಟಿ ಧರಿಸಿ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಕೆಆರ್ ಆಸ್ಪತ್ರೆ ಕಿರಿಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.