ಹೊಸದಿಗಂತ ವಿಜಯನಗರ:
ಹೊಸಪೇಟೆ ಸಮೀಪದ ಟಿಬಿ ಅಣೆಕಟ್ಟಿನ 19ನೇ ಗೇಟ್ ನಲ್ಲಿ ಸ್ಟಾಪ್ ಲಾಗ್ ಗೇಟ್ ಎಲಿಮೆಂಟ್ ಅಳವಡಿಕೆ ಕಾರ್ಯ ಶುಕ್ರವಾರ ಪುನಾರಂಭಗೊಂಡಿದೆ.
ಗುರುವಾರ ಇಡೀ ದಿನ ಪ್ರಯತ್ನಿಸಿದೂ, ಎಲಿಮೆಂಡ್ ಕೊಂಡಿ ಸಮರ್ಪಕವಾಗಿ ಜೋಡಣೆಯಾಗದೇ, ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಮಗಾರಿ ಮತ್ತೆ ಆರಂಭಗೊಂಡಿದೆ. ಗೇಟ್ ಎಲಿಮೆಂಟ್ ಅಳವಡಿಕೆ ಕಾರ್ಯ ಮತ್ತೆ ಪುನಾರಂಭಗೊಂಡಿದೆ. ಗೇಟ್ ಮೇಲ್ಭಾಗದ ಬ್ಯಾಲೆನ್ಸಿಂಗ್ ಭೀಮ್ ತೆರವುಗೊಳಿಸಿದ್ದಾರೆ. ಜಲಾಶಯದ ಸೇಫ್ಟಿ ಇಂಜಿನಿಯರ್ ಕನ್ನಯ್ಯ ನಾಯ್ಡು ಮಾರ್ಗದರ್ಶನದಲ್ಲಿ ಹತ್ತಾರು ತಂತ್ರಜ್ಞರು ಶ್ರಮಿಸುತ್ತಿದ್ದಾರೆ.
ಎರಡು ಎಲಿಮೆಂಟ್ ಗಳ ಆಗಮನ:
ಸ್ಟಾಪ್ ಲಾಗ್ ಗೇಟ್ ನ ಎರಡು ಎಲಿಮೆಂಟ್ ಗಳು ಪೂರೈಕೆಯಾಗಿವೆ. ಹೊಸಪೇಟೆಯ ಸಂಕ್ಲಾಪುರದ ಎಸ್.ನಾರಾಯಣ ಮತ್ತು ಹಿಂದುಸ್ಥಾನ್ ಇಂಡಸ್ಟ್ರೀಸ್ ನಿಂದ ತಲಾವೊಂದು ಎಲಿಮೆಂಟ್ ಗಳು ಬಂದಿವೆ ಎಂದು ತಿಳಿದು ಬಂದಿದೆ.
ಮಾಧ್ಯಮದವರಿದ್ದರೆ ಕೆಲಸ ಮಾಡಲ್ಲ?
ಜಲಾಶಯ ಮೇಲ್ಭಾಗದಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯದ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟು ಮೇಲ್ಭಾಗಕ್ಕೆ ಸಾರ್ವಜನಿಕರು ಸೇರಿದಂತೆ ಮಾಧ್ಯಮದವರಿಗೂ ಪ್ರವೇಶ ನಿಷೇಧಿಸಿದೆ.
ಹೀಗಾಗಿ ಜಲಾಶಯದ ಕೆಳ ಭಾಗದ ಸ್ಮಾಶಾನ ಬಳಿ ನಿಂತು ಸುದ್ದಿ ಮಾಡುತ್ತಿದ್ದರು. ಶುಕ್ರವಾರ ಅದಕ್ಕೂ ಬ್ರೇಕ್ ಹಾಕಲಾಗಿದೆ. ಮುನಿರಾಬಾದ್ ಹೆದ್ದಾರಿಯಿಂದ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯನ್ನೂ ಎಆರ್ ಎಸ್ ಫಾರ್ಮ್ ಸ್ಟೇ ಬಳಿ ಪೊಲೀಸ್ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ.
ಡ್ಯಾಂ ಸೇಪ್ಟಿ ಇಂಜಿನಿಯರ್ ಕನ್ನಯ್ಯ ನಾಯ್ಡು ನಿರ್ದೇಶನದಂತೆ ಯಾರಿಗೇ ಪ್ರವೇಶ ಕಲ್ಪಿಸುತ್ತಿಲ್ಲ. ಡ್ಯಾಂ ಕೆಳ ಭಾಗದ ಸ್ಮಶಾನದ ಬಳಿ ಮಾಧ್ಯಮ ಪ್ರತಿನಿಧಿಗಳೂ ನಿಲ್ಲ ಬಾರದು. ಪತ್ರಕರ್ತರು ಅಲ್ಲಿದ್ದರೆ ನಾನು ಕೆಲಸಮಾಡುವುದಿಲ್ಲವೆಂದು ತಾಕೀತು ಮಾಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.