ಕೋಲ್ಕತ್ತಾ ಮಾರಕ ದಾಳಿ: 113 ರನ್‌ ಗೆ ಹೈದರಾಬಾದ್‌ ಆಲೌಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐಪಿಎಲ್‌ನಲ್ಲಿ ಸರಾಗವಾಗಿ ರನ್‌ಗಳ ಮಳೆಗರೆಯುತ್ತಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಫೈನಲ್ ನಲ್ಲಿ ಎಡವಿದ್ದು, ಮಿಚೆಲ್‌ ಸ್ಟಾರ್ಕ್‌, ವೈಭವ್‌ ಅರೋರಾ, ಹರ್ಷಿತ್‌ ರಾಣಾ, ಆಂಡ್ರೆ ರಸೆಲ್‌ ಹಾಗೂ ವರುಣ್‌ ಚಕ್ರವರ್ತಿ ನೇತೃತ್ವದಲ್ಲಿ ಘಾತಕ ದಾಳಿಗೆ ಕೇವಲ 113 ರನ್‌ ಗೆ ಸರ್ವಪತನ ಕಂಡಿದೆ.

ಈ ಮೂಲಕ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡ ಮೂರನೇ ಬಾರಿಗೆ ಐಪಿಎಲ್‌ ಚಾಂಪಿಯನ್‌ ಆಗುವ ನಿಟ್ಟಿನಲ್ಲಿ 114 ರನ್‌ಗಳ ಸವಾಲು ಪಡೆದುಕೊಂಡಿದೆ.

ಭಾನುವಾರ ಪಿ ಚಿದಂಬರಂ ಮೈದಾನದಲ್ಲಿ ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌ ತಂಡ 62 ರನ್‌ ಬಾರಿಸುವ ವೇಳೆ ತನ್ನ ಪ್ರಮುಖ ಐದು ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಕಳೆದುಕೊಂಡಿತ್ತು. ಹಾಲಿ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯದಲ್ಲಿ 30ಕ್ಕಿಂತ ಹೆಚ್ಚಿನ ಬಾಲ್‌ಗಳನ್ನು ಎದುರಿಸದ ಅಭಿಷೇಕ್‌ ಶರ್ಮ 5 ಎಸೆತಗಳಲ್ಲಿ 2 ರನ್‌ ಬಾರಿಸಿ ಸ್ಟಾರ್ಕ್‌ಗೆ ಮೊದಲನೇ ಓವರ್‌ನಲ್ಲಿಯೇ ಬೌಲ್ಡ್‌ ಆದರು. ಕ್ವಾಲಿಫೈಯರ್‌-1 ಪಂದ್ಯದಲ್ಲಿ ಡಬಲ್‌ ಬಾಲ್‌ ಡಕ್‌ ಎದುರಿಸಿದ್ದ ಸನ್‌ರೈಸರ್ಸ್‌ ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಟ್ರಾವಿಸ್‌ ಹೆಡ್‌ ಈ ಬಾರಿ ಗೋಲ್ಡನ್‌ ಡಕ್‌ ಕಂಡರು. ವೈಭವ್‌ ಅರೋರಾ ಅವರ ಮೊದಲ ಎಸೆತದಲ್ಲಿಯೇ ವಿಕೆಟ್‌ ಕೀಪರ್‌ ಗುರ್ಬಾಜ್‌ಗೆ ಕ್ಯಾಚ್‌ ನೀಡಿ ಹೊರನಡೆದರು.

ರಾಹುಲ್‌ ತ್ರಿಪಾಠಿ ಹಾಗೂ ಏಡೆನ್‌ ಮಾರ್ಕ್ರಮ್‌ (20 ರನ್‌, 23 ಎಸೆತ, 3 ಬೌಂಡರಿ) ಕೆಲ್‌ ರನ್‌ಗಳನ್ನು ಕಲೆಹಾಕುವ ಹೊತ್ತಿಗೆ ಮತ್ತೆ ದಾಳಿಗಿಳಿದ ಸ್ಟಾರ್ಕ್‌, ತ್ರಿಪಾಠಿಯನ್ನು ಡಗ್‌ಔಟ್‌ಗೆ ಅಟ್ಟಿದರು. 1ಏಡೆನ್‌ ಮಾರ್ಕ್ರಮ್‌ ಕೂಡ ದೊಡ್ಡ ಮೊತ್ತ ಪೇರಿಸದೇ ಔಟಾದಾಗ ಸನ್‌ ಸಂಕಷ್ಟ ಎದುರಿಸಿತ್ತು.

ಈ ಹಂತದಲ್ಲಿ ಹೆನ್ರಿಕ್‌ ಕ್ಲಾಸೆನ್‌ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರಾದರೂ ಅವರಿಗೆ ಯಾರೂ ಸಾಥ್‌ ನೀಡಲಿಲ್ಲ. ಶಾಬಾಜ್‌ ಅಹ್ಮದ್‌ 8 ರನ್‌ ಬಾರಿಸಿ ಔಟಾದರೆ, ಅಬ್ದುಲ್‌ ಸಮದ್‌ ಕೇವಲ 4 ರನ್‌ ಗಳಿಸಿದರು. ಕೊನೆಯಲ್ಲಿ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಉತ್ತಮ ಇನ್ನಿಂಗ್ಸ್‌ ಆಡಿದ್ದರಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 113 ರನ್‌ ಗಳಿಸಲು ಸಾಧ್ಯವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!