ಕೋಲ್ಕತ್ತಾ ವೈದ್ಯೆ ಕೊಲೆ ಕೇಸ್​: ಮತ್ತೆ 77 ವೈದ್ಯರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಕೋಲ್ಕತ್ತಾ ಆರ್​ಜಿ ಕರ್​ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಕೇಸ್​ನ ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ವೈದ್ಯರಿಗೆ ರಕ್ಷಣೆ ನೀಡಬೇಕು ಎಂದು ಕೋರಿ ವೈದ್ಯರು ಬಂಗಾಳದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಆದರೆ, ಮಮತಾ ಬ್ಯಾನರ್ಜಿ ಸರ್ಕಾರ ಈ ಬಗ್ಗೆ ಮೌನ ವಹಿಸಿದ್ದು, ಹೀಗಾಗಿ ವಿವಿಧ ಆಸ್ಪತ್ರೆಗಳ ವೈದ್ಯರು ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ.

ಈಗಾಗಲೇ ವಿವಿಧ ಆಸ್ಪತ್ರೆಗಳ 100ಕ್ಕೂ ಅಧಿಕ ವೈದ್ಯರು ಸಾಮೂಹಿಕ ರಾಜೀನಾಮೆ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಕಲ್ಯಾಣಿ ಜೆಎನ್‌ಎಂ ಆಸ್ಪತ್ರೆಯ 77 ಹಿರಿಯ ವೈದ್ಯರು, ಸಿಬ್ಬಂದಿ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ರವಾನಿಸಿದ್ದಾರೆ.

ಅಕ್ಟೋಬರ್​​ 14ರೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಕೆಲಸ ನಿಲ್ಲಿಸುವುದಾಗಿ ಆರೋಗ್ಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ಇಮೇಲ್ ಮೂಲಕ ತಿಳಿಸಿದ್ದಾರೆ.

ಕಿರಿಯ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಮ್ಮ ಬೆಂಬಲವಿರಲಿದೆ. ಪ್ರತಿಭಟನಾನಿರತ ವೈದ್ಯರ ಆರೋಗ್ಯವು ಕ್ಷೀಣಿಸುತ್ತಿದೆ. ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರದಿಂದ ಯಾವುದೇ ಪ್ರಯತ್ನಗಳು ಕಾಣುತ್ತಿಲ್ಲ. ಅತ್ಯಾಚಾರ ಮತ್ತು ಹತ್ಯೆಗೀಡಾದ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆರೋಗ್ಯ ಇಲಾಖೆ ಕಾರ್ಯದರ್ಶಿಯನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಿರಿಯ ವೈದ್ಯರು ಆರಂಭಿಸಿರುವ ಪ್ರತಿಭಟನೆಗೆ ಹಿರಿಯ ವೈದ್ಯರು ಕೈಜೋಡಿಸಿದ್ದಾರೆ. ಆಸ್ಪತ್ರೆಯ 100 ಮಂದಿ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದರು.

ಕೋಲ್ಕತಾದ ಮೆಡಿಕಲ್​ ಕಾಲೇಜಿನ 70ಕ್ಕೂ ಹಿರಿಯ ಸಿಬ್ಬಂದಿ, ಡಾರ್ಜಿಲಿಂಗ್​ ಜಿಲ್ಲೆಯ ಸಿಲಿಗುರಿಯಲ್ಲಿರುವ ಉತ್ತರ ಬೆಂಗಾಲ್​ ಕಾಲೇಜು​ ಮತ್ತು ಆಸ್ಪತ್ರೆಯ 40 ವೈದ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಇದಲ್ಲದೇ, ಪಶ್ಚಿಮ ಮಿಡ್ನಾಪೂರ್​ ಜಿಲ್ಲೆಯ ಮಿಡ್ನಾಪೂರ್​ ಮೆಡಿಕಲ್​ ಕಾಲೇಜು​ ಮತ್ತು ಆಸ್ಪತ್ರೆಯ ವೈದ್ಯರೂ ಕೂಡ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮೊದಲು ಆರ್.​ಜಿ.ಕರ್​ ಆಸ್ಪತ್ರೆಯ 50ಕ್ಕೂ ಹೆಚ್ಚು ಹಿರಿಯ ವೈದ್ಯರು ರಾಜೀನಾಮೆ ನೀಡಿದ್ದರು.ಆದರೆ, ವೈದ್ಯರ ಸಾಮೂಹಿಕ ರಾಜೀನಾಮೆ ಮಾನ್ಯವಾಗಿಲ್ಲ. ಸೇವಾ ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!