ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಕತ್ತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಬೇತಿಯಲ್ಲಿದ್ದ ವೈದ್ಯೆಎ ಮೇಲೆ ನೈಟ್‌ಶಿಫ್ಟ್ ವೇಳೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳ ನಿವಾಸಿ ವೈದ್ಯರು ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ಹೊರರೋಗಿ ವಿಭಾಗಗಳು ಮತ್ತು ತುರ್ತು ರಹಿತ ಶಸ್ತ್ರಚಿಕಿತ್ಸಾ ಆರೋಗ್ಯ ಸೇವೆಗಳಿಗೆ ಹೊಡೆತ ಬಿದ್ದಿದೆ.
ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಕರೆಗೆ ಪ್ರತಿಕ್ರಿಯೆಯಾಗಿ ಈ ಮುಷ್ಕರ ನಡೆಯುತ್ತಿದ್ದು, ನ್ಯಾಯ ಒದಗಿಸುವವರೆಗೆ ಹಾಗೂ ತಮ್ಮ ಬೇಡಿಕೆ ಈಡೇರಿಸದ ಹೊರತು ಮುಷ್ಕರ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಫೋರ್ಡಾ ಪ್ರಕಾರ, ಅನಿರ್ದಿಷ್ಟ ಮುಷ್ಕರದ ಸಮಯದಲ್ಲಿ, ಒಪಿಡಿ ಸೇವೆಗಳು, ಆಪರೇಷನ್ ಥಿಯೇಟರ್‌ಗಳು ಮತ್ತು ವಾರ್ಡ್ ಕರ್ತವ್ಯಗಳನ್ನು ಮುಚ್ಚಲಾಗುವುದು, ಆದರೆ ತುರ್ತು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಾದ ಏಮ್ಸ್, ಆರ್ ಎಂಎಲ್ ಆಸ್ಪತ್ರೆ ಮತ್ತು ಸಫ್ದರ್‌ಜಂಗ್ ಆಸ್ಪತ್ರೆ ಸೇರಿದಂತೆ ಅನೇಕ ಆಸ್ಪತ್ರೆಗಳ ಕಿರಿಯ ವೈದ್ಯರು ಬೆಳಗ್ಗೆ ಮುಷ್ಕರವನ್ನು ಪ್ರಾರಂಭಿಸಿದರು, ಇದರಿಂದಾಗಿ ವೈದ್ಯಕೀಯ ಸೌಲಭ್ಯಗಳ ಹೊರರೋಗಿ ವಿಭಾಗಗಳಿಗೆ ಭೇಟಿ ನೀಡಿದ ರೋಗಿಗಳಿಗೆ ಆರೋಗ್ಯ ಸೌಲಭ್ಯ ಸಿಗದೆ ವಾಪಸ್ಸಾದರು.