ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಚರಂಡಿಗಳಲ್ಲಿ ಹೂಳು ತೆಗೆಯುವಲ್ಲಿ ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಅಧಿಕಾರಿಗಳನ್ನು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ
ಭಾನುವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಗೆ ನಗರದ ಹಲವು ರಸ್ತೆಗಳು ಜಲಾವೃತ್ತಗೊಂಡಿದ್ದವು. ಈ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಡಿಕೆ.ಶಿವಕುಮಾರ್ ಅವರು, ಪ್ರಮುಖ ರಸ್ತೆಗಳ ಬದಿಯಲ್ಲಿರುವ ಚರಂಡಿಗಳಿ ಸ್ಥಿತಿ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು.
ಡಿಕೆ.ಶಿವಕುಮಾರ್ ಅವರು ಹೆಬ್ಬಾಳ ಸಮೀಪದ ಯೋಗೇಶ್ವರನಗರ, ನಾಗವಾರ ಜಂಕ್ಷನ್, ಎಚ್‌ಬಿಆರ್ ಲೇಔಟ್ 5ನೇ ಬ್ಲಾಕ್, ಸಿಲ್ಕ್ ಬೋರ್ಡ್, ಜಯದೇವ ಆಸ್ಪತ್ರೆ ಜಂಕ್ಷನ್ ಸೇರಿದಂತೆ ಇತರೆಡೆ ಪರಿಶೀಲನೆ ನಡೆಸಿದರು.
ಯೋಗೇಶ್ವರನಗರ ಮೇಲ್ಸೇತುವೆ ಮೇಲೆ ಮಳೆನೀರು ನಿಂತಿರುವುದು ಕಂಡು ಬಂದಿತು. ಇದೇ ವೇಳೆ ಸ್ಥಳದಲ್ಲಿದ್ದ ಚರಂಡಿಯನ್ನು ಪರಿಶೀಲನೆ ನಡೆಸಿದ ಅವರು, ನೀರು ಮುಕ್ತವಾಗಿ ಹರಿಯದಿರಲು ಕಾರಣವನ್ನು ಪ್ರಶ್ನಿಸಿದರು. ಕಾಮಗಾರಿ ಮುಗಿದರೂ ಕಟ್ಟಡದ ಅವಶೇಷಗಳನ್ನು ಏಕೆ ತೆರವುಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ, ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು.