ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜೊಳ್ಳೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆಯಾದ ಗಡಾಯಿ ಕಲ್ಲು ಅಥವಾ ನರಸಿಂಹ ಗಡ ವನ್ನು ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಏರಿ ತಮ್ಮ ಸಾಹಸವನ್ನು ಭಾನುವಾರ ಮೆರೆದಿದ್ದಾರೆ.
ತನ್ನ ತಂಡದೊಂದಿಗೆ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅರ್ಚಕ ಗಣೇಶ್ ಭಟ್ ರವರ ನೇತೃತ್ವದಲ್ಲಿ ವಿಶೇಷ ಪೂ,ಜೆ ಪ್ರಾರ್ಥನೆ ಸಲ್ಲಿಸಿ ಹೊರಟ ಜ್ಯೋತಿರಾಜ್ ಇಲ್ಲಿಂದ ಸುಮಾರು ಎರಡು ಕಿಮೀ. ದೂರವನ್ನು ಕಾಡುದಾರಿಯ ಮೂಲಕ ಕ್ರಮಿಸಿ ಗಂಟೆ 9.50ರ ಸುಮಾರಿಗೆ ಬರಿಗೈ ಮೂಲಕ ಗಡಾಯಿಕಲ್ಲನ್ನು ಏರತೊಡಗಿದರು. ಸಮುದ್ರಮಟ್ಟಕ್ಕಿಂತ 1,700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ತುತ್ತ ತುದಿಯನ್ನು 11.50ಕ್ಕೆ ತಲುಪಿ ಅಲ್ಲಿ ತನ್ನ ತಂಡದೊಂದಿಗೆ ಕನ್ನಡ ಧ್ವಜವನ್ನು ಹಾರಿಸಿ ತಮ್ಮ ಬಹುದಿನದ ಆಸೆಯನ್ನು ಪೂರೈಸಿಕೊಂಡರು.
ಅರಣ್ಯ ಇಲಾಖೆಯ ಸೂಚನೆಯಂತೆ ಸೊಂಟಕ್ಕೆ ಕಟ್ಟಿದ ಬೆಲ್ಟ್ ಹಾಗೂ ಪಕ್ಕದಲ್ಲಿದ್ದ ರೋಪ್ ಗೆ ಹುಕ್ ಮೂಲಕ ಸಂಪರ್ಕ ಕಲ್ಪಿಸಿ ಸುರಕ್ಷತೆ ದೃಷ್ಟಿಯಿಂದ ಮೇಲೆರಲು ಅವಕಾಶ ನೀಡಲಾಗಿತ್ತು. ಇವರು ಒಂದೊಂದು ಅಡಿ ಮೇಲೆರಿದಂತೆ ಗಡಾಯಿಕಲ್ಲಿನ ಮೇಲ್ಭಾಗದಲ್ಲಿದ್ದ ಸಂಗಡಿಗರು ರೋಪನ್ನು ಬಿಗಿಯುತ್ತ ಹತ್ತಲು ಸಹಾಯ ಆಗುವಂತೆ ವ್ಯವಸ್ಥೆ ಮಾಡುತ್ತಿದ್ದರು.
ಗಡಾಯಿ ಕಲ್ಲು ಹತ್ತಲು ಎರಡು ತಾಸು ಪಡೆದುಕೊಂಡ ಜ್ಯೋತಿರಾಜ್ ಮಧ್ಯೆ ನಾಲ್ಕು ಕಡೆಗಳಲ್ಲಿ ಕಲ್ಲಿನ ಪೊಟರೆ ಹಾಗೂ ಮರಗಳಲ್ಲಿ ಒಟ್ಟು ಅರ್ಧಗಂಟೆ ಅವಧಿ ವಿಶ್ರಾಂತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಗಡಾಯಿಕಲ್ಲು ಹತ್ತಿದ ಬಳಿಕ ಅರ್ಧ ತಾಸು ವಿಶ್ರಾಂತಿ ಪಡೆದು ಮಾಮೂಲು ಮೆಟ್ಟಿಲಿನ ಮೂಲಕ ಸಂಗಡಿಗರೊಂದಿಗೆ ಕೆಳಗಿಳಿದು ಬಂದರು.
ಈ ಸಾಹಸವನ್ನು ವೀಕ್ಷಿಸಲು ಚಂದ್ಕೂರು ದೇವಸ್ಥಾನದ ಪರಿಸರದ ಅಲ್ಲಲ್ಲಿ ಜನರು ವಿರಳ ಸಂಖ್ಯೆಯಲ್ಲಿ ಕಂಡುಬಂದರು. ಎರಡು ಕಿಮೀ ದೂರದಿಂದ ವೀಕ್ಷಣೆ ನಡೆಸಿದ ಮಂದಿಗೆ ಜ್ಯೋತಿರಾಜ್ ಬೆಟ್ಟ ಹತ್ತುವಾಗ ಹಕ್ಕಿಯ ಗಾತ್ರದಲ್ಲಿ ಕಂಡು ಬಂದರು. ವನ್ಯಜೀವಿ ವಿಭಾಗವು ಜ್ಯೋತಿರಾಜ್ ಮತ್ತು ಅವರ ತಂಡಕ್ಕೆ ಮಾತ್ರ ಅರಣ್ಯ ಭಾಗದ ಮೂಲಕ ಗಡಾಯಿಕಲ್ಲಿನ ಬುಡ ಭಾಗಕ್ಕೆ ಹೋಗಲು ಅನುಮತಿ ನೀಡಿದ ಕಾರಣ ವೀಕ್ಷಣೆಗೆ ಆಗಮಿಸಿದವರು ಚಂದ್ಕೂರು ದೇವಸ್ಥಾನದ ಪರಿಸರದಿಂದಲೇ ವೀಕ್ಷಣೆ ನಡೆಸಬೇಕಾಯಿತು.