ಹೊಸದಿಗಂತ ವರದಿ,ವಿಜಯನಗರ:
ಕೊಟ್ಟೂರಿನಲ್ಲಿ ಲಕ್ಷಾಂತರ ಭಕ್ತರ ಮಧ್ಯ ಶ್ರೀಗುರು ಬಸವೇಶ್ವರ ಸ್ವಾಮಿ ರಥೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ನೆರೆದ ಲಕ್ಷಾಂತರ ಭಕ್ತರು ರತೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ, ಹೂ ಸಮರ್ಪಿಸಿ ಭಕ್ತಿ ಸಮರ್ಪಿಸಿದರು.
ಜಾತ್ರಾ ಮಹೋತ್ಸವ ಹಿನ್ನೆಲೆ ಕಳೆದ ಐದು ದಿನಗಳಿಂದ ಶ್ರೀ ಕ್ಷೇತ್ರದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಜಾತ್ರೆಯ 5ನೇ ದಿನವಾದ ಗುರುವಾರ ಸಂಜೆ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ತೇರನ್ನು ವಿವಿಧ ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು. ಆಯಾಗಾರರಿಂದ ರಥದ ಅಂಕಣವನ್ನು ಕಟ್ಟಿ, ಪ್ರತಿ ಅಂಕಣಕ್ಕೂ ವಿವಿಧ ಬಣ್ಣಗಳ ಬಟ್ಟೆಯಿಂದ ಅಲಂಕಾರ ಕೈಗೊಳ್ಳಲಾಗಿತ್ತು.
ಸೂರ್ಯಾಸ್ತ ಸಮಯದಲ್ಲಿ ನಂದಿಕೋಲನ್ನು ಹಿಡಿದು ರಥದ ಸುತ್ತ ಕುಣಿಯುತ್ತ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು.
ಪಲ್ಲಕ್ಕಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಶಿವಪ್ರಕಾಶ ಕೊಟ್ಟೂರು ಸ್ವಾಮೀಜಿ ಭಕ್ತಾದಿಗಳ ಕಡೆ ಕೈಬೀಸಿ ತೇರಿನಲ್ಲಿ ಆಸೀನರಾದರು. ನಂತರ ಪಲ್ಲಕ್ಕಿಯಿಂದ ಶ್ರೀಗುರು ಬಸವೇಶ್ವರ ಸ್ವಾಮಿಯನ್ನು ತೇರಿನಲ್ಲಿ ಪ್ರತಿಷ್ಟಾಪಿಸಿ ಭಕ್ತರ ಸಮ್ಮುಖದಲ್ಲಿ ತೇರನ್ನು ಎಳೆಯಲಾಯಿತು.
ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆ ಒದಗಿಸಲು ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಅವರು ಜಾತ್ರಾ ಸ್ಥಳದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದರು.