ಹೊಸದಿಗಂತ ವರದಿ, ಶಿವಮೊಗ್ಗ
ಕೆಪಿಸಿ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿರುವುದು ಮತ್ತು ಸ್ಥಳೀಯರಿಗೆ ಕುಡಿಯುವ ನೀರು ಒದಗಿಸಲು ಮೀನಮೇಷ ಎಣಿಸುತ್ತಿರುವ ಧೋರಣೆ ಖಂಡಿಸಿ ಮಂಗಳವಾರ ಶಾಸಕ ಹಾಲಪ್ಪ ಹರತಾಳು ನೇತೃತ್ವದಲ್ಲಿ ಕಾರ್ಗಲ್‌ನ ಕೆಪಿಸಿ ಕಚೇರಿ ಎದುರು ಧರಣಿ ನಡೆಸಲಾಯಿತು.
ನಂತರ ಕೆಪಿಸಿ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ಜಿ.ಸಿ.ಮಹೇಂದ್ರ ಮತ್ತು ವಿದ್ಯುತ್ ವಿಭಾಗದ ಮುಖ್ಯ ಅಭಿಯಂತರ ನಾರಾಯಣ ಪಿ. ಗಜಕೋಶ ಅವರು ಶಾಸಕರ ಜೊತೆ ಮಾತುಕತೆ ನಡೆಸಿ, ಮುಂದೆ ಇಂತಹ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ ಮೇಲೆ ಧರಣಿ ಹಿಂದಕ್ಕೆ ಪಡೆದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಹಾಲಪ್ಪ ಹರತಾಳು, ಕೆಪಿಸಿ ಅಧಿಕಾರಿಗಳು ಸ್ಥಳೀಯರಿಗೆ ಒಂದಿಲ್ಲೊಂದು ಕಾನೂನು ನೆಪ ಹೇಳಿ ತೊಂದರೆ ಕೊಡುತ್ತಿದ್ದಾರೆ. ಕೆಪಿಸಿಯವರು ನೆಲದ ಕಾನೂನಿಗೆ ಸಹ ಬೆಲೆ ಕೊಡದೆ ರೈತರು ಮತ್ತು ಸ್ಥಳೀಯರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಮರಳು ತೆಗೆಯುತ್ತಾರೆ ಎಂದು ಜನರಿಗೆ ತೊಂದರೆ ಕೊಡುವುದು, ರೈತರು ಕಲ್ಲಂಗಡಿ ಬೆಳೆಯುತ್ತಾರೆ ಎಂದು ಕಿರುಕುಳ ನೀಡುವುದು, ಶರಾವತಿ ನದಿಯಿಂದ ನೀರು ತೆಗೆದುಕೊಳ್ಳಬೇಡಿ, ಕೆಪಿಸಿ ಆಸ್ಪತ್ರೆಗೆ ಸಾರ್ವಜನಿಕರು ಬರಬಾರದು ಎಂದು ನೂರಾರು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಹಿಂದಿನ ಎಲ್ಲ ಮುಖ್ಯ ಅಭಿಯಂತರರು ಸ್ಥಳೀಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಈಗ ಬಂದಿರುವ ಅಧಿಕಾರಿ ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದ್ದಾರೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ರೈತರ ನೆಮ್ಮದಿಗೆ ಭಂಗ ತರುವ ಪ್ರಯತ್ನ ಮಾಡಬಾರದು ಎಂದು ತಿಳಿಸಿದರು.