ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣ (Telangana)ನಡುವೆ ಕೃಷ್ಣಾ ನದಿ (Krishna River) ನೀರು ಹಂಚಿಕೆ ವಿವಾದ ಪರಿಹರಿಸಲು ನ್ಯಾಯಧಿಕರಣ (Tribunal) ರಚನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಕೃಷ್ಣಾ ನ್ಯಾಯಧಿಕರಣ ಕರ್ನಾಟಕ, ಮಹರಾಷ್ಟ್ರ, ಅವಿಭಜಿತ ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ ಆಂಧ್ರಪ್ರದೇಶದಿಂದ ಹೊರ ಬಂದ ತೆಲಂಗಾಣ ನೀರು ಮರು ಹಂಚಿಕೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಪ್ರಕರಣ ವಿಚಾರಣೆ ವೇಳೆ ತೆಲಂಗಾಣ ಮನವಿಗೆ ಕರ್ನಾಟಕ-ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿದ್ದವು, ನಮ್ಮ ನೀರಿನ ಪ್ರಮಾಣದಲ್ಲಿ ಕಡಿಮೆ ಮಾಡುವಂತಿಲ್ಲ, ಆಂಧ್ರಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣದಲ್ಲಿ ತೆಲಂಗಾಣಕ್ಕೆ ಪಾಲು ನೀಡಬೇಕು ಎಂದು ಒತ್ತಾಯಿಸಿದ್ದವು, ಇದಕ್ಕೆ ತೆಲಂಗಾಣವೂ ಒಪ್ಪಿದ ಹಿನ್ನೆಲೆ ಎರಡು ರಾಜ್ಯಗಳ ನಡುವೆ ನೀರು ಹಂಚಲು ನ್ಯಾಯಧಿಕರಣ ಸ್ಥಾಪಿಸಲು ಸುಪ್ರೀಂಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
-ಅದರಂತೆ ಅಂತರ-ರಾಜ್ಯ ನದಿ ನೀರಿನ ವಿವಾದಗಳ (ISRWD) ಕಾಯ್ದೆ, 1956ರ ಅಡಿಯಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-II ಗೆ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದನ್ನು ಅಧಿಕೃತವಾಗಿ ಹೇಳಿದ್ದಾರೆ.