September 17, 2026
Thursday, September 17, 2026
spot_img

ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ನೀರು: ಕಾಮಗಾರಿಗೆ ಚುರುಕು ಮುಟ್ಟಿಸಿದ ಸಚಿವ ಎನ್. ಚಲುವರಾಯಸ್ವಾಮಿ

ಹೊಸದಿಗಂತ ವರದಿ ತುಮಕೂರು :

ಒಂದೆಡೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ಇದೀಗ ನವೆಂಬರ್ ಅಂತ್ಯದೊಳಗೆ ಎತ್ತಿನಹೊಳೆ ಯೋಜನೆಯ ಮೂಲಕ ತುಮಕೂರಿಗೆ ನೀರು ಹರಿಸಲು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಪಣತೊಟ್ಟಿದ್ದಾರೆ. ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಅಭೂತಪೂರ್ವ ವೇಗ ನೀಡಿದ್ದಾರೆ.

ತುಮಕೂರಿನ ಗುಬ್ಬಿ ತಾಲ್ಲೂಕಿನ ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ‘ಪ್ಯಾಕೇಜ್ 11’ರ ಕಾಮಗಾರಿ ಸ್ಥಳಕ್ಕೆ ಗುರುವಾರ ಖುದ್ದು ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಿದರು. ಕಾಮಗಾರಿ ಸ್ಥಳದಲ್ಲಿ ಎದುರಾಗಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಸಚಿವರು ತ್ವರಿತ ಹೆಜ್ಜೆ ಇಟ್ಟಿದ್ದಾರೆ. ಕಂಚಿಗಾನಹಳ್ಳಿಯ ಅರಣ್ಯ ಇಲಾಖೆಗೆ ಸೇರಿದ 1.9 ಕಿ.ಮೀ ಜಾಗವನ್ನು ಪರಿಶೀಲಿಸಿದ ಅವರು, ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ 2ನೇ ಹಂತದ (ಸ್ಟೇಜ್ 2) ಅನುಮತಿಗೆ ಸಂಬಂಧಿಸಿದ ಕಡತಗಳು ಈಗಾಗಲೇ ನವದೆಹಲಿಗೆ ತಲುಪಿವೆ ಎಂದು ಸ್ಪಷ್ಟಪಡಿಸಿದರು.

ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು (ACS) ದೆಹಲಿಗೆ ಅರ್ಜಿ ಸಲ್ಲಿಸಿದ್ದು, ಸತತ ಪ್ರಯತ್ನದ ಫಲವಾಗಿ ಇನ್ನೊಂದು ವಾರದಲ್ಲಿ ಕೇಂದ್ರದಿಂದ ಅಂತಿಮ ಒಪ್ಪಿಗೆ (ಕ್ಲಿಯರೆನ್ಸ್) ದೊರೆಯುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು. ಗುರುತ್ವಾಕರ್ಷಣಾ ಕಾಲುವೆ (ಗ್ರಾವಿಟಿ ಕೆನಾಲ್) ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು. ಕಾಮಗಾರಿ ಸ್ಥಳದಲ್ಲಿ 28 ಮೀಟರ್ ಆಳದ ಭೂಮಿಯನ್ನು ಅಗೆಯಬೇಕಾಗಿದ್ದು (ಡೀಪ್ ಕಟ್), ಇಲ್ಲಿ ಮಣ್ಣು ಕುಸಿಯದಂತೆ ಅತ್ಯಂತ ಎಚ್ಚರಿಕೆಯಿಂದ ‘ಕಟ್ ಅಂಡ್ ಕವರ್’ ತಂತ್ರಜ್ಞಾನದ ಮೂಲಕ ಗುಣಮಟ್ಟದ ಕೆಲಸ ನಡೆಯಬೇಕು ಎಂದು ನಿರ್ದೇಶಿಸಿದರು.

ಮಣ್ಣನ್ನು ತಾತ್ಕಾಲಿಕವಾಗಿ ಹೊರಹಾಕಲು ಹೆಚ್ಚುವರಿಯಾಗಿ ನೀಡಿರುವ 10 ಎಕರೆ ಜಾಗದಲ್ಲೇ ಹಾಕಿ, ತದನಂತರ ಅದೇ ಮಣ್ಣನ್ನು ಮರಳಿ ತುಂಬುವ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಎರಡು ಕಡೆ ಕಾಲುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 15ರ ಒಳಗಾಗಿ ತುಮಕೂರು ಭಾಗದ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಹಾಗೂ ಶೇಕಡಾ 100ರಷ್ಟು ನೀರು ಪೂರೈಸುವುದು ನಿಶ್ಚಿತ ಎಂದು ಅವರು ಭರವಸೆ ನೀಡಿದರು.

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎತ್ತಿನಹೊಳೆ ಯೋಜನೆಯು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪ್ರಾರಂಭಗೊಂಡ ‘ಕನಸಿನ ಯೋಜನೆ’ ಎಂಬುದನ್ನು ಸ್ಮರಿಸಿದರು. ಆರಂಭದಲ್ಲಿ 8 ಸಾವಿರ ಕೋಟಿ ರೂಪಾಯಿಗಳಷ್ಟಿದ್ದ ಯೋಜನಾ ವೆಚ್ಚವು ಪ್ರಸ್ತುತ 23 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆದಾಗ್ಯೂ, ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಇದರ ಜೊತೆಗೆ, ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದ್ದ ‘ಬಿಕ್ಕೆಗುಡ್ಡ ಯೋಜನೆ’ಯನ್ನೂ ಸಹ ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಪ್ರಕಟಿಸಿದರು. ಹೇಮಾವತಿ ಲಿಂಕ್ ಕೆನಾಲ್ ಕೈಬಿಡುವಂತೆ ಬಂದಿರುವ ರೈತರ ಮನವಿ ಕುರಿತು ಅತ್ಯಂತ ಸೂಕ್ಷ್ಮವಾಗಿ ಹಾಗೂ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿದ ಸಚಿವರು, “ತುಮಕೂರು ಮತ್ತು ರಾಮನಗರ ಎರಡೂ ಭಾಗದ ರೈತರು ನಮಗೆ ಸಮಾನರು. ಎಲ್ಲರೂ ನಮ್ಮವರೇ ಆಗಿರುವುದರಿಂದ, ಯಾರೊಬ್ಬರಿಗೂ ಅನ್ಯಾಯವಾಗದಂತೆ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ, ಎಲ್ಲರಿಗೂ ಒಳಿತಾಗುವ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

ಇದೇ ವೇಳೆ ರೈತರ ಆರ್ಥಿಕ ಶೋಷಣೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ರೈತರು ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್ (ಕಿರು ಸಾಲ) ಮೊರೆ ಹೋಗಬಾರದು ಎಂದು ಕಳಕಳಿಯ ಕಿವಿಮಾತು ಹೇಳಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದ ಬಗ್ಗೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ದೂರು ನೀಡುತ್ತಿದ್ದು, ಲಿಖಿತ ದೂರುಗಳಿಲ್ಲದೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸರ್ಕಾರಕ್ಕೆ ಕಷ್ಟಕರವಾಗುತ್ತದೆ. ಹೀಗಾಗಿ ರೈತರು ಇಂತಹ ಸಾಲದ ಸುಳಿಗೆ ಸಿಲುಕದೆ ಎಚ್ಚರಿಕೆಯಿಂದ ವ್ಯಯ ಇರಬೇಕು ಎಂದು ಸಚಿವರು ಮನವಿ ಮಾಡಿದರು.

ಈ ವೇಳೆ ಗುಬ್ಬಿ ಕ್ಷೇತ್ರದ ಶಾಸಕ ಹಾಗೂ ಕೆಎಸ್ ಆರ್ ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !