July 25, 2026
Saturday, July 25, 2026
spot_img

ಕೃಣಾಲ್ ಪಾಂಡ್ಯ ಜವಾಬ್ದಾರಿಯುತ ಆಟ, ಭುವಿ ಫಿನಿಶಿಂಗ್ ಟಚ್: ರಾಯ್‌ಪುರದಲ್ಲಿ ಆರ್‌ಸಿಬಿ ಅಬ್ಬರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರೀಡಾಭಿಮಾನಿಗಳ ಉಸಿರು ಬಿಗಿಹಿಡಿಯುವಂತೆ ಮಾಡಿದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್‌ಗಳ ಸ್ಮರಣೀಯ ಜಯ ದಾಖಲಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಭುವನೇಶ್ವರ್ ಕುಮಾರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಕೇವಲ 28 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಮನ್ ಧೀರ್ ಮತ್ತು ತಿಲಕ್ ವರ್ಮಾ ಆಸರೆಯಾದರು. ಇವರಿಬ್ಬರ ಜವಾಬ್ದಾರಿಯುತ ಆಟದಿಂದಾಗಿ ಮುಂಬೈ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತು.

ಬೆಂಗಳೂರು ಪರ ಬೌಲಿಂಗ್‌ನಲ್ಲಿ ಅಬ್ಬರಿಸಿದ ಭುವನೇಶ್ವರ್ ಕುಮಾರ್ 4 ವಿಕೆಟ್ ಕಿತ್ತು ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಜೋಶ್ ಹ್ಯಾಜಲ್‌ವುಡ್, ರಾಸಿಕ್ ಸಲಾಂ ಮತ್ತು ರೊಮಾರಿಯೋ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ದೇವದತ್ ಪಡಿಕ್ಕಲ್ (12) ಮತ್ತು ನಾಯಕ ರಜತ್ ಪಾಟೀದಾರ್ (8) ಕೂಡ ಬೇಗನೆ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಕ್ರೀಸ್ ಹಂಚಿಕೊಂಡ ಕೃಣಾಲ್ ಪಾಂಡ್ಯ (73 ರನ್, 46 ಎಸೆತ) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಜಾಕೋಬ್ ಬೆಥೆಲ್ 27 ರನ್ ಮತ್ತು ಜಿತೇಶ್ ಶರ್ಮಾ 18 ರನ್ ಗಳಿಸಿ ಸಾಥ್ ನೀಡಿದರು.

ಪಂದ್ಯದ ಅಂತಿಮ ಓವರ್ ಅತ್ಯಂತ ರೋಚಕವಾಗಿತ್ತು. ಕೊನೆಯ 3 ಎಸೆತಗಳಲ್ಲಿ ತಂಡದ ಗೆಲುವಿಗೆ 9 ರನ್ ಬೇಕಿತ್ತು. ಶೆಫರ್ಡ್ ಔಟಾದ ನಂತರ ಕ್ರೀಸ್‌ಗೆ ಬಂದ ಭುವನೇಶ್ವರ್ ಕುಮಾರ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ನಂತರದ ಎಸೆತದಲ್ಲಿ ಒಂದು ರನ್ ಪಡೆದರು. ಕೊನೆಯ ಎಸೆತದಲ್ಲಿ ರಾಸಿಕ್ ಸಲಾಂ ಎರಡು ರನ್ ಓಡುವ ಮೂಲಕ ಬೆಂಗಳೂರು ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಸಂಭ್ರಮ ಮನೆಮಾಡಿದೆ. ಬೌಲಿಂಗ್‌ನಲ್ಲಿ 4 ವಿಕೆಟ್ ಹಾಗೂ ಬ್ಯಾಟಿಂಗ್‌ನಲ್ಲಿ ನಿರ್ಣಾಯಕ ಸಿಕ್ಸರ್ ಸಿಡಿಸಿದ ಭುವನೇಶ್ವರ್ ಕುಮಾರ್ ಪಂದ್ಯದ ಆಕರ್ಷಣೆಯಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !