ಕುಮಾರಸ್ವಾಮಿ ಮುನಿಸು ಶಮನ: ಆ.3 ರಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಪಾದಯಾತ್ರೆ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಆ.3ರಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಪಾದಯಾತ್ರೆ ಆರಂಭವಾಗಲಿದೆ. ಇದರಲ್ಲಿ ಹಾಸನ ಮಾಜಿ ಶಾಸಕ ಪ್ರೀತಂಗೌಡ ಪಾತ್ರವೂ ಇಲ್ಲ, ಮಹತ್ವವೂ ಇಲ್ಲ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ಮಾಹಿತಿ ನೀಡಿದರು.

ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವರು ಮಾತುಕತೆ ನಡೆಸಿದ್ದು, ಅಂತಿಮವಾಗಿ ಬಿಜೆಪಿ ಹಾಗೂ ಜೆಡಿಎಸ್‌ ಒಗ್ಗೂಡಿ ಶನಿವಾರದಿಂದ (ಆಗಸ್ಟ್‌ 3) ಪಾದಯಾತ್ರೆ ಆರಂಭಿಸಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಪ್ರಲ್ಹಾದ್‌ ಜೋಶಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಶನಿವಾರದಿಂದ ನಮ್ಮ ಪಾದಯಾತ್ರೆ ಪ್ರಾರಂಭ ಆಗಲಿದೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಮೂಡಾ ಹಾಗೂ ವಾಲ್ಮೀಕಿ ಹಗರಣಗಳು ಇದಕ್ಕೆ ಜ್ವಲoತ ಉದಾಹರಣೆಗಳಾಗಿವೆ. ಕಾಂಗ್ರೆಸ್‌ನವರು ಕೂಡ ಮೂಡಾ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಒಟ್ಟಿಗೆ ಪಾದಯಾತ್ರೆ ಕೈಗೊಳ್ಳುತ್ತವೆ. ಕುಮಾರಸ್ವಾಮಿ ಅವರ ಜತೆ ಇದ್ದ ಸಣ್ಣ ಕಮ್ಯುನಿಕೇಷನ್ ಗ್ಯಾಪ್ ಸರಿ ಆಗಿದೆ. ನಾವು ಕುಮಾರಸ್ವಾಮಿ ಅವರ ಹತ್ತಿರ ಮಾತಾಡಿದ್ದೇವೆ. 7 ದಿನಗಳ ಪಾದಯಾತ್ರೆ ಪೂರ್ಣಗೊಳ್ಳಲಿದೆ ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಆಗಸ್ಟ್‌ 3ರಿಂದ ಪಾದಯಾತ್ರೆ ಆರಂಭವಾಗಲಿದೆ. ಆದರೆ, ಪಾದಯಾತ್ರೆಗೆ ನಾನು ಬೆಂಬಲ ನೀಡುವುದಿಲ್ಲ ಎಂಬುದಾಗಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಪಾದಯಾತ್ರೆ ಕುರಿತ ಚರ್ಚೆ ಸಭೆಗೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಕರೆಸಿದ್ದರಿಂದ ಕುಮಾರಸ್ವಾಮಿ ಬೇಸರಗೊಂಡು ಬೆಂಬಲ ವಾಪಸ್‌ ಪಡೆದಿದ್ದರು.

ಇದರ ಬೆನ್ನಲ್ಲಿಯೇ ದೆಹಲಿಯಲ್ಲಿ ಸಭೆ ನಡೆಸಿದ ಬಿಜೆಪಿ ಹೈಕಮಾಂಡ್ ಪ್ರೀತಂ ಗೌಡನಿಗೆ ಮಹ್ವತ ನೀಡದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ. ಇದರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ ಪಾದಯಾತ್ರೆ ಮಾಡಲಿವೆ ಎಂದು ಬಿಜೆಪಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. ಶನಿವಾರ ಬೆಳಗ್ಗೆ 8.30ಕ್ಕೆ ನೈಸ್ ರೋಡ್ ಜಂಕ್ಷನ್‌ನಿಂದ ಪಾದಯಾತ್ರೆ ಪ್ರಾರಂಭ ಆಗುತ್ತದೆ. ರಾಜ್ಯದ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ಶಾಸಕರು ಇರುತ್ತಾರೆ ಕುಮಾರಸ್ವಾಮಿ ಅವರು ಸಹ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಮಾಡುತ್ತಿದ್ದೇವೆ. ಇದನ್ನು ಯಶಸ್ವಿಗೊಳಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ಮಾತನಾಡಿ, ರಾಜ್ಯದ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಶಾಸಕರು, ಸಂಸದರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. 6 ಕೋಟಿ ಕನ್ನಡಿಗರ ಪರವಾಗಿ ನಾವು ಮೈತ್ರಿ ಕೂಟ ಧ್ವನಿ ಎತ್ತುತ್ತಿದ್ದೇವೆ. ಆಗಸ್ಟ್ 3ರ ಶನಿವಾರದಿಂದ ಪಾದಯಾತ್ರೆಯನ್ನು ಬೆಂಗಳೂರಿನ ನೈಸ್ ರಸ್ತೆ ಜಂಕ್ಷನ್‌ನಿಂದ ಆರಂಭಿಸಲಾಗುತ್ತದೆ. ಜೆಡಿಎಸ್, ಬಿಜೆಪಿ ಪಕ್ಷಗಳು ಪಾದಯಾತ್ರೆ ಉಸ್ತುವಾರಿ ಹೊತ್ತುಕೊಳ್ಳಲಿವೆ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಾದಯಾತ್ರೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಅವರ ನೇತೃತ್ವ ಇರುವುದಿಲ್ಲ. ಮುಖ್ಯವಾಗಿ ಪಾದಯಾತ್ರೆಲ್ಲಿ ಪ್ರೀತಂಗೌಡ ಅವರ ಪಾತ್ರವೂ ಇಲ್ಲ, ಮಹತ್ವವೂ ಇಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!