Sunday, August 14, 2022

Latest Posts

ʼಸ್ವಾತಂತ್ರ್ಯ ಭಾರತೀಯರ ಜನ್ಮಸಿದ್ಧ ಹಕ್ಕು‌ʼ ಎಂದ ಘೋಷಿಸಿ ಹೋರಾಡಿದ್ದ ವೀರನಾರಿ ಕುಂತಲಾ ಕುಮಾರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಅನನ್ಯ ಸ್ವಾತಂತ್ರ್ಯ ಹೋರಾಟಗಾರ್ತಿ ಕುಂತಲಾ ಕುಮಾರಿ ಸಬತ್ ಅವರು 1901ರ ಫೆಬ್ರವರಿ 8ರಂದು ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಜನಿಸಿದರು.
ಅವರ ತಂದೆ ಡೇನಿಯಲ್ ವೈದ್ಯರಾಗಿದ್ದರು. ಡೇನಿಯಲ್ ಅವರು ಪುರಿ ಜಿಲ್ಲೆಯ ದಂಡಮುಕುಂದಪುರ ಗ್ರಾಮದವರು. ನಂತರ ಉತ್ತಮ ಉದ್ಯೋಗ ಅವಕಾಶ ಸಿಕ್ಕಿದ್ದರಿಂದ ಬರ್ಮಾಕ್ಕೆ ತೆರಳಿದರು. ಆದರೆ ಕೆಲವು ಕೌಟುಂಬಿಕ ಸಮಸ್ಯೆಗಳಿಂದಾಗಿ ಕುಂತಲಾ ತನ್ನ ತಾಯಿ ಮೋನಿಕಾ ಜೊತೆಗೆ ಮತ್ತೆ ಒಡಿಶಾಗೆ ಮರಳಿ ಬಂದು ಖೋರ್ಧಾ ಮತ್ತು ಕಟಕ್‌ ನಗರಗಳಲ್ಲಿ ಅಧ್ಯಯನ ಮಾಡಿದರು. ರಾವೆನ್‌ಶಾ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ ನಂತರ ಕಟಕ್‌ನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದರು. ಆ ಬಳಿಕ ವೈದ್ಯೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಆಕೆ ವೈದ್ಯಕೀಯ ವೃತ್ತಿಗಿಂತ ಬರವಣಿಗೆಯಲ್ಲಿ ಹೆಚ್ಚಿನ ಉತ್ಸಾಹವನ್ನು ಹೊಂದಿದ್ದಳು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಹಲವಾರು ದೇಶಭಕ್ತಿ ಮತ್ತು ಕ್ರಾಂತಿಕಾರಿ ಹಾಡುಗಳನ್ನು ರಚಿಸಿದರು. ಅವಳ ಹೃದಯದಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಗೋಪಬಂಧು ದಾಸ್‌ರಿಂದ ಅವಳು ಹೆಚ್ಚು ಸ್ಫೂರ್ತಿ ಪಡೆದಳು. ಅವರು ಒಡಿಯಾದಲ್ಲಿ ಮಾತ್ರವಲ್ಲದೆ ಇಂಗ್ಲಿಷ್, ಬಂಗಾಳಿ ಮತ್ತು ಹಿಂದಿ ಭಾಷೆಗಳಲ್ಲಿಯೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಆ ಬಳಿಕ ಆಕೆ ಅಖಿಲ ಭಾರತ ಆರ್ಯ ಮಹಿಳಾ ಸಮ್ಮಿಲನಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಅಲಿಘರ್‌ನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯೂ ಆಗಿ ಕಾರ್ಯನಿರ್ವಹಿಸಿದರು.
ಕುಂತಲಾ ದೇವಿ ತಮ್ಮ ಕವನಗಳು ಮತ್ತು ಬರಹಗಳೊಂದಿಗೆ ಲಕ್ಷಾಂತರ ಮಹಿಳೆಯರು ಮತ್ತು ಯುವಕರಿಗೆ ಧ್ವನಿಯಾದಳು. ಅವರ ಕವಿತೆಯ ವಿಷಯ ವಸ್ತುಗಳು ಮಹಾತ್ಮಾ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರಂತಹ ರಾಷ್ಟ್ರೀಯ ನಾಯಕರ ಸಿದ್ಧಾಂತಗಳನ್ನು ಗೌರವಿಸಿತು ಮತ್ತು ಯುವಕರು ಮತ್ತು ಮಹಿಳೆಯರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರಮುಖ ಪ್ರೇರಕ ಶಕ್ತಿಯಾಯಿತು. ಗಾಂಧಿಯವರ ನಿಜವಾದ ಶಿಷ್ಯೆಯಾಗಿ, ಸ್ವಾತಂತ್ರ್ಯವು ಭಾರತೀಯರ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿದಳು. ತನ್ನ ಕವಿತೆಗಳಲ್ಲಿ ಗಾಂಧಿ, ನೆಹರು ಮತ್ತು ಚರಕದ ಮಹತ್ವವನ್ನು ಸಾರುವ ಮೂಲಕ ಜನರನ್ನು ಹೋರಾಟದತ್ತ ಸೆಳೆದಳು.
ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ಆಂದೋಲನದ ಸಮಯದಲ್ಲಿ ಆಕೆ ಒಡಿಶಾದ ಮಹಿಳೆಯರಿಗೆ ಅದರಲ್ಲಿ ಸೇರಲು ಕರೆ ನೀಡಿದರು. ತನ್ನ ಬರವಣಿಗೆ ಮುಖೇನ ಸಮಾಜದಲ್ಲಿ ಕೆಳಸ್ಥಾನದಲ್ಲಿರುವ ದೀನದಲಿತ ಮತ್ತು ಸಾಮಾಜಿಕವಾಗಿ ದುರ್ಬಲರಾದ ವರ್ಗದ ಬಗ್ಗೆ ನಿರಂತರ ಕಾಳಜಿ ವ್ಯಕ್ತಪಡಿಸಿದರು. ಸಮಾಜದಲ್ಲಿನ ಮೂಢನಂಬಿಕೆಗಳು ಮತ್ತು ಅಸಮಾನತೆಯ ವಿರುದ್ಧವೂ ಆಕೆ ಸಮರ ಸಾರಿದಳು. ಆಕೆಯ  ದೇಶಭಕ್ತಿ ಸಾರುವ ಕವನ ಸಂಕಲನಗಳಾದ ‘ಸ್ಫುಲಿಂಗ್’ ಹಾಗೂ ‘ಆಹ್ವಾನ್’ ‘ಗರ್ಜತಕೃಷಕ’ ಮೊದಲಾದವು ಬ್ರಿಟಿಷ್ ಜನರ ಕುತಂತ್ರವನ್ನು ಎತ್ತಿ ತೋರಿಸುವುದಲ್ಲದೆ, ಜನರಿಗೆ ಪರಕೀಯರ ಬಗ್ಗೆ ಎಚ್ಚರವನ್ನು ನೀಡಿತು. ಆದರೆ ಬ್ರಿಟಿಷ್ ಸರ್ಕಾರವು ಅವುಗಳನ್ನು ನಿಷೇಧಿಸಿತು. ಕುಂತಲಾ ಕುಮಾರಿ ಸಬತ್ ಇಷ್ಟಲ್ಲಾ ಸಾಧಿಸಿದ್ದು ತನ್ನ ಅಲ್ಪ ಆಯಸ್ಸಿನಲ್ಲಿ. ಆಕೆ 1938 ರಲ್ಲಿ ತನ್ನ 37 ನೇ ವಯಸ್ಸಿನಲ್ಲಿ ನಿಧನರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss