ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಲೋಕದಲ್ಲಿ ‘ವಯಸ್ಸು ಕೇವಲ ಒಂದು ಸಂಖ್ಯೆ’ ಎಂಬ ಮಾತನ್ನು ಬಿಹಾರದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಐಪಿಎಲ್ 2026ರ ಕಿರಿಯ ಆಟಗಾರನ ಆಕ್ರಮಣಕಾರಿ ಆಟಕ್ಕೆ ಇದೀಗ ನ್ಯೂಜಿಲೆಂಡ್‌ನ ದೈತ್ಯ ವೇಗಿ ಕೈಲ್ ಜೇಮಿಸನ್ ಕೂಡ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ಮೇ 1 ರಂದು ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹಣಾಹಣಿಯಲ್ಲಿ ಒಂದು ಕುತೂಹಲಕಾರಿ ಘಟನೆ ಜರುಗಿತು. ರಾಜಸ್ಥಾನ್ ಪರ ಕಣಕ್ಕಿಳಿದಿದ್ದ 15 ವರ್ಷದ ವೈಭವ್ ಸೂರ್ಯವಂಶಿ, ಜೇಮಿಸನ್ ಎಸೆದ ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ತಾನು ಯಾರಿಗೂ ಕಮ್ಮಿಯಿಲ್ಲ ಎಂದು ಸಾರಿದ್ದರು. ಆದರೆ, ಮರು ಎಸೆತದಲ್ಲೇ ಜೇಮಿಸನ್ ಅದ್ಭುತ ಯಾರ್ಕರ್ ಮೂಲಕ ವೈಭವ್ ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು.
ವಿಕೆಟ್ ಪಡೆದ ಸಂಭ್ರಮದಲ್ಲಿ ಜೇಮಿಸನ್ ಅತೀವ ಆಕ್ರಮಣಶೀಲತೆ ಪ್ರದರ್ಶಿಸಿದ್ದರು. ಕೇವಲ 15 ವರ್ಷದ ಬಾಲಕನ ವಿಕೆಟ್ ಪಡೆದಾಗ ಅಂತರಾಷ್ಟ್ರೀಯ ಅನುಭವವಿರುವ ಬೌಲರ್ ಇಷ್ಟೊಂದು ಆಕ್ರೋಶ ತೋರಿಸಿದ್ದೇಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.
ಪಂದ್ಯದ ನಂತರ ಈ ಬಗ್ಗೆ ಮಾತನಾಡಿದ ಜೇಮಿಸನ್, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ನನ್ನ ಕ್ರಿಕೆಟ್ ಜೀವನದಲ್ಲಿ ನಾನು ಎಂದಿಗೂ 15 ವರ್ಷದ ಬಾಲಕನೊಬ್ಬನಿಗೆ ಈ ಮಟ್ಟಿಗೆ ಹೆದರಿರಲಿಲ್ಲ. ಆತನ ಬ್ಯಾಟಿಂಗ್ ಶೈಲಿ ಮತ್ತು ಬೌಲರ್‌ಗಳ ಮೇಲೆ ಹೇರುವ ಒತ್ತಡ ನಿಜಕ್ಕೂ ಭಯಾನಕವಾಗಿದೆ. ಆ ಭಯದಿಂದಲೇ ನಾನು ಅಷ್ಟು ಆಕ್ರಮಣಕಾರಿಯಾಗಿ ಸಂಭ್ರಮಿಸಿದೆ,” ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ವೈಭವ್ ಸೂರ್ಯವಂಶಿ ಕೇವಲ ಜೇಮಿಸನ್ ಮಾತ್ರವಲ್ಲದೆ, ಈಗಾಗಲೇ ಜಸ್ಪ್ರೀತ್ ಬುಮ್ರಾ, ಕಗಿಸೊ ರಬಾಡ ಮತ್ತು ಜೋಶ್ ಹೇಝಲ್ವುಡ್ ಅಂತಹ ವಿಶ್ವದ ಶ್ರೇಷ್ಠ ವೇಗಿಗಳ ಎಸೆತಗಳನ್ನು ಲೀಲಾಜಾಲವಾಗಿ ಸಿಕ್ಸರ್-ಬೌಂಡರಿಗಟ್ಟಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡರೂ, ಅವರ ಬ್ಯಾಟಿಂಗ್ ಪ್ರಭಾವ ಎಷ್ಟಿದೆ ಎಂಬುದಕ್ಕೆ ಜೇಮಿಸನ್ ನೀಡಿರುವ ಈ ಹೇಳಿಕೆಯೇ ಸಾಕ್ಷಿ.
ಐಪಿಎಲ್ ಇತಿಹಾಸದಲ್ಲಿ ಕಿರಿಯ ವಯಸ್ಸಿನಲ್ಲೇ ಸ್ಟಾರ್ ಬೌಲರ್‌ಗಳ ನಿದ್ದೆಗೆಡಿಸಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್‌ನ ಮುಂದಿನ ಭರವಸೆಯ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ.



