ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗದ ಕೊರತೆ, ದಾನಿಗಳಿಗಾಗಿ ಹುಡಕಾಟ

ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಅಗತ್ಯವಿದ್ದು, ಯೋಜನೆಗಾಗಿ 5 ಎಕರೆ ಭೂಮಿ ಅವಶ್ಯಕತೆ ಎಂದು ಜಿಲ್ಲಾಡಳಿತ ಹೇಳಿದೆ. ಸ್ಥಳ ನೀಡಲು ದಾನಿಗಳು ಮುಂದೆ ಬರಬೇಕೆಂದು ಕೊಡವ ಕೂಟಾಳಿಯಡ ಕೂಟ ಮನವಿ ಮಾಡಿದೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಕೂಟದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಸಂಘಟನೆಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಯ ಅಭಿಯಾನ ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಿದ್ದು, ಶೀಘ್ರ ಯೋಜನೆ ಕಾರ್ಯಗತಗೊಳ್ಳಬೇಕೆನ್ನುವ ಧ್ವನಿ ಎದ್ದಿದೆ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಆಸ್ಪತ್ರೆಯ ಅವಶ್ಯಕತೆಯನ್ನು ವಿವರಿಸಿ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.

ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳದ ಕೊರತೆ ಇರುವುದರಿಂದ ಸೂಕ್ತ ಸ್ಥಳದ ಅನ್ವೇಷಣೆ ನಡೆಯುತ್ತಿದೆ. ಮಡಿಕೇರಿಯ ಆಸುಪಾಸಿನಲ್ಲಿ 5 ಎಕರೆಯಷ್ಟು ಪ್ರದೇಶ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾಗಿರುತ್ತದೆ ಎಂದು ಜಿಲ್ಲಾಡಳಿತದಿಂದ ಮಾಹಿತಿ ದೊರೆತಿದೆ. ಆದ್ದರಿಂದ ಸ್ಥಳ ದಾನಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಬಹುದೆಂದು ಶರತ್ ಸೋಮಣ್ಣ ತಿಳಿಸಿದರು.

ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆ ಮಾತ್ರ ಲಭಿಸುತ್ತಿದ್ದು, ಉತ್ತಮ ಗುಣಮಟ್ಟದ ಚಿಕಿತ್ಸೆ, ಗಂಭೀರ ಸಮಸ್ಯೆಗೆ ತುರ್ತು ಚಿಕಿತ್ಸೆ, ರೋಗ ಪತ್ತೆ ಹಚ್ಚುವ ಪರೀಕ್ಷೆ ನಡೆಯುತ್ತಿಲ್ಲ. ತಜ್ಞ ವೈದ್ಯರುಗಳ ಕೊರತೆಯಿಂದ ರೋಗಿಗಳು ಜೀವ ಉಳಿಸಿಕೊಳ್ಳಲು ಹೊರ ಜಿಲ್ಲೆ, ರಾಜ್ಯದ ಆಸ್ಪತ್ರೆಯ ಮೊರೆ ಹೋಗುತ್ತಿದ್ದಾರೆ. ಅಪಘಾತ ಸಂಭವಿಸಿದಾಗ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲೆ ಅಥವಾ ರಾಜ್ಯಕ್ಕೆ ಪ್ರಯಾಣ ಸುವಾಗ ಅರ್ಧದಾರಿಯಲ್ಲೇ ಗಾಯಾಳು ಸಾವನ್ನಪ್ಪಿದ ಎಷ್ಟೋ ನಿದರ್ಶನಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಸಂಬಂಧಪಟ್ಟ ಸಚಿವರು ಹಾಗೂ ಕೊಡಗಿನ ಜನಪ್ರತಿನಿಧಿಗಳಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.

ಆಸ್ಪತ್ರೆ ನಿರ್ಮಾಣಕ್ಕೆ ಅವಶ್ಯ ಇರುವ ಜಾಗ ನೀಡುವ ಸ್ಥಳದಾನಿಗಳು ಇದ್ದಲ್ಲಿ ಕೊಡವ ಕೂಟಾಳಿಯಡ ಕೂಟದ ಈ (8762304175) ಸಂಖ್ಯೆಯನ್ನು ಕೂಡಾ ಸಂಪರ್ಕಿಸಬಹುದು ಎಂದು ಶರತ್ ಸೋಮಣ್ಣ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!