ಕಾಡುತ್ತಿದೆ ಕಾಗದದ ಕೊರತೆ: ಇನ್ನು ಪಠ್ಯಪುಸ್ತಕ ಮುದ್ರಣವೇ ಸ್ಥಗಿತ??

ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿಹೋಗಿರುವ ಪಾಕಿಸ್ತಾನದಲ್ಲಿ ಪಠ್ಯಪುಸ್ತಕ ಮುದ್ರಣಕ್ಕೂ ಕುತ್ತು ಬಂದಿದೆ.
ಮುದ್ರಣ ಕಾಗದದ ಬೆಲೆ ಗಗನಮುಖಿಯಾಗಿರುವ ಬೆನ್ನಲ್ಲೇ ಭಾರೀ ಬೆಲೆ ತೆತ್ತು ಇವುಗಳನ್ನು  ಖರೀದಿಸಲಾಗದೇ ಪ್ರಕಾಶನ ಸಂಸ್ಥೆಗಳು ಕಂಗಾಲಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪಠ್ಯಪುಸ್ತಕಗಳನ್ನು ಮುದ್ರಿಸುವುದಾದರೂ ಹೇಗೆ ಎಂಬ ಚಿಂತೆಯಲ್ಲಿವೆ.
ದೇಶೀಯವಾಗಿ ಉತ್ಪಾದಿಸಲಾಗುತ್ತಿರುವ ಮುದ್ರಣ ಕಾಗದದ ಬೆಲೆ ಕಳೆದ ಜನವರಿಯಿಂದ ಇದುವರೆಗೆ ಒಂದು ಕೆ.ಜಿ.ಗೆ ಸರಿಸುಮಾರು 100 ರೂ. ರಷ್ಟು ಹೆಚ್ಚಳವಾಗಿದೆ. ಹಲವು ತಿಂಗಳ ಹಿಂದೆ ದರಕ್ಕೆ ಹೋಲಿಸಿದರೆ ಒಟ್ಟಾರೆ ದರದಲ್ಲಿ ಶೇ. 200ರಷ್ಟು ಏರಿಕೆಯಾಗಿದೆ. ವಿದೇಶಿ ಕಾಗದಗಳ ಮೊರೆ ಹೋಗೋಣವೆಂದರೆ ತೆರಿಗೆ, ಸಾಗಣೆ ವೆಚ್ಚ ಸೇರಿದಂತೆ ಅವು ಇನ್ನೂ ದುಬಾರಿಯಾಗುತ್ತವೆ. ದುಬಾರಿ ಬೆಲೆಗೆ ಕಾಗದ ಖರೀದಿಸಿ ಪಠ್ಯ ಪುಸ್ತಕಗಳನ್ನು ಮುದ್ರಿಸುವುದಾದರೂ ಹೇಗೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದೇ ಆಗಸ್ಟ್‌ನಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಒದಗಿಸುವುದು ಈಗ ಹೊಸ ಸವಾಲಾಗಿದೆ. ಬೆಲೆ ಇಳಿಕೆಗೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶನ ಸಂಸ್ಥೆಗಳು ಆಗ್ರಹಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!