ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ.
ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತಿರುಮಲಕ್ಕೆ ಕಳುಹಿಸುವ ತುಪ್ಪದ ಟ್ಯಾಂಕರ್‌ಗಳಿಗೆ ಜಿಪಿಎಸ್, ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಲು ಮುಂದಾಗಿದೆ.
ಈ ಹಿಂದೆ ವಾರಕ್ಕೆ ಮೂರು ಟ್ಯಾಂಕರ್‌ಗಳನ್ನ ಆಮದು ಮಾಡಿಕೊಳ್ಳಲಾಗುತ್ತಿತ್ತು. ಒಟ್ಟಾರೆ 3 ತಿಂಗಳಿಗೆ 350 ಟನ್ ತುಪ್ಪ ನೀಡುವಂತೆ ಕೆಎಂಎಫ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹಿಂದೆ ಟಿಟಿಡಿ ಮಾಡಿಕೊಂಡ ಒಪ್ಪಂದ ಇನ್ನೂ ಒಂದೂವರೆ ತಿಂಗಳಲ್ಲಿ ಮುಕ್ತಾಯವಾಗಲಿದೆ. ಹಾಗಾಗಿ ಪ್ರತಿನಿತ್ಯ ಒಂದೊಂದು ಟ್ಯಾಂಕರ್ ತುಪ್ಪ ತರಿಸಿಕೊಳ್ಳಲು 6 ತಿಂಗಳ ಒಪ್ಪಂದ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಕೆಎಂಎಫ್ ಎಂಡಿ ಜಗದೀಶ್ ಪ್ರತಿಕ್ರಿಯಿಸಿದ್ದು, ಟಿಟಿಡಿಗೆ ತೆರಳುವ ನಂದಿನಿ ತುಪ್ಪದ ವಾಹನಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ವಾಹನಗಳಿಗೆ ಜಿಪಿಎಸ್ GPS ಟ್ರ್ಯಾಕ್, ಎಲೆಕ್ಟ್ರಿಕ್ ಡೋರ್ ಅಳವಡಿಲಾಗಿದೆ. ಲ್ಯಾಬ್ ಟೆಸ್ಟ್ ಮಾಡಿದ ಬಳಿಕ ನಂದಿನ ತುಪ್ಪ ಪೂರೈಸಲಾಗುತ್ತೆ. ಈ ಹಿಂದೆ ಇದ್ದ ಸರ್ಕಾರದಲ್ಲಿ ಟಿಟಿಡಿಗೆ ತುಪ್ಪ ಪೂರೈಕೆ ಮಾಡಿರಲಿಲ್ಲ. ಇದೀಗ ಟಿಟಿಡಿ ಬೇಡಿಕೆ ಮೇರೆಗೆ ನಂದಿನಿ ತುಪ್ಪ ಪೂರೈಕೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮುಜರಾಯಿ ದೇಗುಲಗಳಿಗೆ ನಂದಿನಿ ತುಪ್ಪ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಬೇರೆ ರಾಜ್ಯಗಳಿಂದಲೂ ನಂದಿನ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ ಹೀಗಾಗಿ ಪ್ರತಿದಿನ 15 ಲಕ್ಷ ಲೀಟರ್ ಹಾಲಿನಿಂದ ನಂದಿನಿ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೆ ತಿರುಪತಿಗೆ ಯಾಕೆ ತುಪ್ಪ ಪೂರೈಸುತ್ತಿಲ್ಲ ಎಂದು ಕೇಳುತ್ತಿದ್ದರು. ಇಂದು ತಿಮ್ಮಪ್ಪನ ಕೃಪೆಯಿಂದ ಹೆಚ್ಚು ತುಪ್ಪ ಪೂರೈಕೆ ಮಾಡುತ್ತಿದ್ದೇವೆ. ಇದು ಕೆಎಂಎಫ್ನ ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಾಹನದಲ್ಲಿ ಏನು ವಿಶೇಷತೆ?
ಟಿಟಿಡಿಗೆ ಕೆಎಂಎಫ್‌ನಿಂದ ಸರಕು ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ.
ತುಪ್ಪ ಇರುವ ಟ್ಯಾಂಕರ್‌ಗೆ ಜಿಪಿಎಸ್ ಸ್ಕ್ಯಾನರ್ ಲಾಕ್ ಅಳವಡಿಕೆ.
ಇಲ್ಲಿ ಟ್ಯಾಂಕರ್ ಒಮ್ಮೆ ಲಾಕ್ ಆದ್ರೆ ಟಿಟಿಡಿಯಲ್ಲಿಯೇ ಓಪನ್ ಮಾಡಲು ಅವಕಾಶ.
ಟಿಟಿಡಿಯಲ್ಲಿ ಓಪನ್ ಮಾಡಬೇಕು ಅಂದ್ರೆ ಪಾಸ್ ವರ್ಡ್ ಕಡ್ಡಾಯ.
ಟ್ಯಾಂಕರ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಕೆಎಂಎಫ್ ಅಧಿಕಾರಿಗಳಿಗೆ ಒಟಿಪಿ ರವಾನೆ.
ಒಟಿಪಿ ನಂಬರ್ ಹೇಳಿದ್ರೆ ಮಾತ್ರ ಓಪನ್ ಆಗಲಿರುವ ತುಪ್ಪದ ಟ್ಯಾಂಕರ್.