ಹೊಸದಿಗಂತ ವರದಿ, ಚಿತ್ರದುರ್ಗ:
ವಿಶ್ವ ಹಿಂದೂ ಪರಿಷತ್ ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿ, ಮಂಗಳೂರು ಮೂಲದ ಶರಣ್ ಪಂಪ್‌ವೆಲ್ ಅವರಿಗೆ ಚಿತ್ರದರ್ಯ ಜಿಲ್ಲೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹಿರಿಯೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಪ್ರತಿಷ್ಟಾಪನೆ ಮಾಡಿರುವ ಸೆ.೨೨ ರಂದು ನಡೆಯಬೇಕಿದ್ದ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಶರಣ್ ಪಂಪ್‌ವೆಲ್ ಅವರ ದಿಕ್ಸೂಚಿ ಭಾಷಣ ನಿಗದಿಯಾಗಿತ್ತು.
ಆದರೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಶರಣ್ ಪಂಪ್‌ವೆಲ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಸೆ.೨೮ ರಂದು ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಲಕ್ಷಾಂತರ ಜನರು ಸೇರಲಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಬೇಕಿರುವ ಕಾರಣ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.
ಹೀಗಾಗಿ ಸೆ.೨೨ ರಿಂದ ಅ.೭ ರವರೆಗೆ ಶರಣ್ ಪಂಪ್‌ವೆಲ್ ಅವರಿಗೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.