ರಾಮ ಜನ್ಮಭೂಮಿಯಲ್ಲಿ ಲಕ್ಷ ದರ್ಶಕರ ಸಂಖ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಯೋಧ್ಯೆ: ರಾಮನಗರಿ ಅಯೋಧ್ಯೆಯಲ್ಲಿ ಹೊಸ ಕ್ಯಾಲೆಂಡರ್ ವರ್ಷದ ಮೊದಲ ದಿನ ರಾಮನ ಜನ್ಮಸ್ಥಳದಲ್ಲಿ ಲಕ್ಷಾಂತರ ಭಕ್ತರು ರಾಮಲಲ್ಲಾ ಮತ್ತು ಮಂದಿರ ನಿರ್ಮಾಣ ಕಾರ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ. ಇದರಿಂದ 2023ರ ಡಿಸೆಂಬರ್‌ನಲ್ಲಿ ಮಂದಿರ ತೆರೆಯುವ ವೇಳೆಗೆ ಭಕ್ತರ ಸಂಭ್ರಮ ಹೇಗಿರುತ್ತದೆ ಎಂಬುದು ಸಾಬೀತಾಗಿದೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಶನಿವಾರದ ಡೇಟಾವನ್ನು ಬಿಡುಗಡೆ ಮಾಡಿದ್ದಾರೆ. ಒಂದೇ ದಿನದಲ್ಲಿ 1.12 ಲಕ್ಷ ಭಕ್ತರು ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದು ರಾಮನವಮಿಯ ದಾಖಲೆಯನ್ನು ಮುರಿದಿದೆ.

ಅಯೋಧ್ಯೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಹನುಮಾನ್‌ಗಢಿಗೆ ಹೋಗುವ ರಸ್ತೆಯಲ್ಲಿ ಜನ್ಮಭೂಮಿ ಸಂಕೀರ್ಣದ ವರೆಗೆ ಹಲವು ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿಂದೆ ಹೊಸ ವರ್ಷದ ಸಂದರ್ಭದಲ್ಲಿ ರಾಮಜನ್ಮಭೂಮಿಯಲ್ಲಿ ಇಷ್ಟೊಂದು ಜನಜಂಗುಳಿ ಕಂಡು ಬರುತ್ತಿರಲಿಲ್ಲ. ಹೊಸ ವರ್ಷದ ಬೆಳಗಿನಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ರಾಮಭಕ್ತರು ಅಯೋಧ್ಯೆಗೆ ಆಗಮಿಸತೊಡಗಿದರು. ಜಿಲ್ಲಾಡಳಿತವು ಅಯೋಧ್ಯೆಯಲ್ಲಿ ಬಿಗಿ ಭದ್ರತೆಯೊಂದಿಗೆ ಮಾರ್ಗ ಬದಲಾವಣೆಗೆ ವ್ಯವಸ್ಥೆಗಳನ್ನು ಮಾಡಿತ್ತು, ಆದರೆ ಈ ವ್ಯವಸ್ಥೆಯು ಸಹ ಸಾಕಾಗಲಿಲ್ಲ.

ಅಯೋಧ್ಯೆ ನಗರದೊಳಗೆ ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರವಷ್ಟೇ ಅಲ್ಲ, ಅಯೋಧ್ಯೆಯ ರಸ್ತೆಗಳಲ್ಲಿಯೂ ಇದೇ ಸನ್ನಿವೇಶ ಏರ್ಪಟ್ಟಿತ್ತು. ಬೆಳಗ್ಗೆಯಿಂದ ಸಂಜೆಯವರೆಗೂ ಇದೇ ಪರಿಸ್ಥಿತಿ ಇತ್ತು. ಮಧ್ಯಾಹ್ನದ ವೇಳೆ ಹನುಮಾನ್‌ಗಢಿ ದೇವಸ್ಥಾನದ ಬಾಗಿಲು ಮುಚ್ಚಿದಾಗ ಕೆಲಕಾಲ ತೀವ್ರ ಜನಸ್ತೋಮ ಕಂಡು ಬಂದು, ನೂಕುನುಗ್ಗಲು ಉಂಟಾಯಿತು. ಆದರೆ ಹಾಜರಿದ್ದ ಭದ್ರತಾ ಪಡೆಗಳು, ಜನಸಂದಣಿಯನ್ನು ನಿಯಂತ್ರಿಸಿ, ಹನುಮಾನ್‌ಗಢಿ ಮತ್ತು ರಾಮಜನ್ಮಭೂಮಿ ರಾಮಲಲ್ಲಾನ ದರ್ಶನ ಪಡೆಯಲು ಎಲ್ಲರಿಗೂ ಪ್ರವೇಶ ಕಲ್ಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿದ ನಂತರ ಅಯೋಧ್ಯೆಯಲ್ಲಿ ಪ್ರವಾಸೋದ್ಯಮ ಚುರುಕು ಪಡೆಯುತ್ತಿದೆ. ನಿತ್ಯ ಸಾವಿರಾರು ಮಂದಿ ಭಕ್ತರು, ಯಾತ್ರಿಕರು ಅಯೋಧ್ಯೆಗೆ ಆಗಮಿಸಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಇದರೊಂದಿಗೆ ರಾಮಮಂದಿರ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನೂ ವೀಕ್ಷಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!