Saturday, February 24, 2024

ದೇಶವನ್ನು ಪ್ರಗತಿಪಥದತ್ತ ಮುನ್ನಡೆಸಿದ ಲಾಲ್ ಬಹದ್ದೂರ್ ಶಾಸ್ತ್ರಿ ದೂರದೃಷ್ಟಿ ಹೊಂದಿದ್ದ ನಾಯಕ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಜನರ ಭಾಷೆಯನ್ನು ಅರಿತು, ದೇಶವನ್ನು ಪ್ರಗತಿಪಥದತ್ತ ಮುನ್ನಡೆಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರು ಒಬ್ಬ ದೂರದೃಷ್ಟಿಯುಳ್ಳ ಮಹಾನ್ ನಾಯಕರು. ಶಾಸ್ತ್ರಿಜೀ ಅವರು ಮಹಾತ್ಮ ಗಾಂಧೀಜಿಯವರಿಂದ ಗಾಢವಾಗಿ ಪ್ರಭಾವಿತರಾಗಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ನಮನಗಳನ್ನು ಅರ್ಪಿಸಿದ ಮುಖ್ಯ ಮಂತ್ರಿಗಳು, ಶಾಸ್ತ್ರಿಜೀ ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಅಂಶಗಳ ಸಾಕಾರ ರೂಪವಾಗಿದ್ದರು ಎಂದಿದ್ದಾರೆ.

ರಾಷ್ಟ್ರದ ಅಭಿವೃದ್ಧಿಗೆ ಅನವರತ ಶ್ರಮಿಸಿದ ಶಾಸ್ತ್ರಿಜೀ, ಅವರ ಜೀವನದ ಕಡೇ ನಿಮಿಷದವರೆಗೂ ದೇಶ ಸೇವೆಗಾಗಿ ಅವರ ಬದುಕನ್ನು ಮುಡಿಪಾಗಿಟ್ಟಿದ್ದರು ಎಂದು ಅವರ ಕೊಡುಗೆಗಳನ್ನು ಮುಖ್ಯ ಮಂತ್ರಿಗಳು ಸ್ಮರಿಸಿದ್ದಾರೆ.

ಪ್ರಧಾನಮಂತ್ರಿಗಳಾಗಿ ‘ಜೈ ಜವಾನ್, ಜೈ ಕಿಸಾನ್ ‘ ಎಂಬ ಘೋಷವಾಕ್ಯವನ್ನು ದೇಶಕ್ಕೆ ನೀಡಿ ಜನಶಕ್ತಿಯನ್ನು ಬಡಿದೆಚ್ಚರಿಸಿದರು. ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ನೇಗಿಲನ್ನು ಹೊತ್ತ ರೈತನನ್ನು ಗೌರವಿಸಲು ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡಿದರು ಎಂದು ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಲವಾರು ಜೀವಗಳನ್ನು ಬಲಿಪಡೆದ ರೈಲ್ವೆ ಅವಘಡದ ಹೊಣೆ ಹೊತ್ತು ರೈಲ್ವೆ ಸಚಿವ ಸ್ಥಾನಕ್ಕೆ ರಾಜೇನಾಮೆ ನೀಡಿದ್ದರು. ಅವರ ಈ ನಡೆಯನ್ನು ಸಂಸತ್ತು ಹಾಗೂ ಇಡೀ ದೇಶ ಮೆಚ್ಚಿಕೊಂಡಿತ್ತು. ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು, ಈ ಘಟನೆಯ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಉನ್ನತ ವಿಚಾರ ಹಾಗೂ ಪ್ರಾಮಾಣಿಕತೆಯನ್ನು ಬಹುವಾಗಿ ಶ್ಲಾಘಿಸಿದ್ದರು. ಶಾಸ್ತ್ರಿಗಳನ್ನು ಒಬ್ಬ ಅತ್ಯುತ್ತಮ ನಾಯಕನಾಗಿ, ದಂತಕಥೆಯಾಗಿದ್ದ , ಧೈರ್ಯ ಹಾಗೂ ಪ್ರಾಮಾಣಿಕತೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಭಾರತದ ಮಹಾನ್ ಪುತ್ರನನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!