Friday, December 8, 2023

Latest Posts

ತಡರಾತ್ರಿ ಪೊಲೀಸರ ಕಾರ್ಯಾಚರಣೆ : ಕೇರಳದ ಕಾರು ಸಹಿತ ಗೋಮಾಂಸ ವಶ

ಹೊಸದಿಗಂತ ವರದಿ ಮಡಿಕೇರಿ:

ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಕಾರೊಂದನ್ನು ತಡರಾತ್ರಿಯಲ್ಲಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು, ಕೊನೆಗೂ ಮೂರು ಚೀಲಗಳಲ್ಲಿ ತುಂಬಿದ್ದ ಗೋಮಾಂಸವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಆರೋಪಿಗಳು ಕತ್ತಲಲ್ಲಿ ಪರಾರಿಯಾಗಿದ್ದು, ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿರುವ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಕೇರಳ ರಾಜ್ಯದ ನೋಂದಣಿ (ಕೆಲ್ 26 ಎಲ್ 8042) ಸಂಖ್ಯೆಯ ಬಿಳಿ ಬಣ್ಣದ ವ್ಯಾಗನರ್ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ಸುಳಿವು ದೊರೆತ ನಾಪೋಕ್ಲು ಪೊಲೀಸರು ಆ ಕಾರನ್ನು ಬೆನ್ನಟ್ಟಿದ್ದಾರೆ. ಆದರೆ ಕಾರು ನಿಲ್ಲಿಸದ ಆರೋಪಿಗಳು ಮಡಿಕೇರಿಯತ್ತ ಪರಾರಿಯಾಗಲು ಯತ್ನಿಸಿದಾಗ ಮಡಿಕೇರಿ ಸಮೀಪದ ಮೇಕೇರಿಯ ಸುಭಾಷ್ ನಗರದ ಬಳಿ ಆರೋಪಿಗಳಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ.

ಈ ಸಂದರ್ಭ ಆರೋಪಿಗಳು ಗಾಯಗೊಂಡರೂ, ಕಾರಿನಿಂದಿಳಿದು ಕತ್ತಲಲ್ಲಿ ಪರಾರಿಯಾಗಿದ್ದಾರೆ.
ಬಳಿಕ ನಾಪೋಕ್ಲು ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ವಾಹನ ಸಹಿತ ಮೂರು ಚೀಲಗಳಲ್ಲಿದ್ದ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿರುವ ಕಾರನ್ನು ಕ್ರೇನ್ ಮೂಲಕ ಠಾಣೆಗೆ ಕೊಂಡೊಯ್ದಿದ್ದು, ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿದೆ. ಆರೋಪಿಯೊಬ್ಬನ ಕೈ ಮುರಿದು ರಕ್ತ ಸುರಿಯುತ್ತಿದ್ದರೂ ಸಹ ಭಯದಿಂದ ಆರೋಪಿಗಳು ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ
ರಾಜ್ಯದಲ್ಲಿ ಸರಕಾರ ಗೋಹತ್ಯೆ ನಿಷೇಧಿಸಿದ್ದರೂ, ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮವಾಗಿ ಗೋಹತ್ಯೆ, ಗೋಮಾಂಸ ಮಾರಾಟ ನಡೆಯುತ್ತಲೇ ಇದೆ. ಈ ಅಕ್ರಮಗಳ ವಿರುದ್ಧ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!