ಸರ್ವ ರೋಗಕ್ಕೂ ನಗುವೊಂದೇ ಮದ್ದು. ನಗು ನೋವು ಮರೆಸುವ ಶಕ್ತಿ ಮಾತ್ರವಲ್ಲ, ಇದು ನಮ್ಮ ಯೋಗಕ್ಷೇಮವನ್ನೂ ಸುಧಾರಿಸುತ್ತದೆ. ಮಾನಸಿಕ ಆರೋಗ್ಯ ವೃದ್ಧಿಗೂ ನಗು ಬೇಕೇ ಬೇಕು. ಒಟ್ಟಾರೆ ನಮ್ಮ ಆರೋಗ್ಯ ಸುಧಾರಣೆಗೂ ನಗು ಮುಖ್ಯ. ನಗುವಿನ ಮಹತ್ವ ಹಾಗೂ ನಗುವಿನ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ ತಿಂಗಳ ಮೊದಲನೇ ಭಾನುವಾರದಂದು ವಿಶ್ವ ನಗು ದಿನವನ್ನು ಆಚರಿಸಲಾಗುತ್ತದೆ. ಇದರ ಮಹತ್ವ ಹಾಗೂ ಇತಿಹಾಸ ತಿಳಿಯೋಣ.
ವಿಶ್ವ ನಗು ದಿನವನ್ನು 1988 ರಲ್ಲಿ ನಗು ಯೋಗ ಆಂದೋಲನದ ಸಂಸ್ಥಾಪಕ ಡಾ. ಮದನ್ ಕಟಾರಿಯಾ ಪ್ರಾರಂಭಿಸುತ್ತಾರೆ. ಇವರು ಮೊದಲ ಬಾರಿಗೆ ಮುಂಬೈನಲ್ಲಿ ವಿಶ್ವ ನಗು ದಿನವನ್ನು ಆಚರಿಸಿದರು. ನಂತರ ಇದು ಜಾಗತಿಕ ಆಂದೋಲನವಾಯಿತು.
ಈ ದಿನವನ್ನು ಆಚರಿಸುವ ಹಿಂದಿನ ಉದ್ದೇಶ ಜನರಲ್ಲಿ ಸಂತೋಷವನ್ನು ಹರಡುವುದು ಮಾತ್ರವಲ್ಲದೆ ನಗುವಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸುವುದು, ಜನರಲ್ಲಿ ಏಕತೆ ಮತ್ತು ಸದ್ಭಾವನೆಯ ಭಾವನೆಯನ್ನು ಉತ್ತೇಜಿಸುವುದಾಗಿದೆ.
ಸದ್ಯ ಪ್ರಪಂಚದಾದ್ಯಂತ 115ಕ್ಕೂ ಹೆಚ್ಚು ದೇಶಗಳಲ್ಲಿ ನಗು ಕ್ಲಬ್‌ಗಳು ಸ್ಥಾಪಿತಗೊಂಡಿವೆ.