ಕೇಂದ್ರ ಸರ್ಕಾರದ ಯೋಜನೆಗಳ ಆಟೋ ಪ್ರಚಾರ ಕಾರ್ಯಕ್ಕೆ ಚಾಲನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಸಾವಿರ ಆಟೋಗಳಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಕೆಲಸ ಮಾಡಲಾಗುತ್ತದೆ ಎಂದು ಚಿತ್ರದುರ್ಗ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಸಿ. ರಘುಚಂದನ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಏಕೆ ಮತ್ತೆ ಪ್ರಧಾನಿಯಾಗಬೇಕೆಂದು ತಿಳಿಸುವ ಬ್ಯಾನರ್ ಪ್ರಿಂಟ್ ಮಾಡಿಸಿ ಆಟೋಗಳಿಗೆ ಅಂಟಿಸಿ ಪ್ರಚಾರ ಮಾಡಲಾಗುತ್ತದೆ. ಇದು ಇಡೀ ಭಾರತದಲ್ಲಿ ಮೊಟ್ಟ ಮೊದಲ ಕಾರ್ಯಕ್ರಮವಾಗಿದೆ. ಚಿತ್ರದುರ್ಗದಲ್ಲಿ ಪ್ರಾಯೋಗಿಕವಾಗಿ 150 ಆಟೋಗಳಿಗೆ ಚಾಲನೆ ನೀಡಲಾಗುತ್ತಿದೆ. ಲೋಕಸಭಾ ವ್ಯಾಪ್ತಿಯಲ್ಲಿ ಆಯಾ ತಾಲೂಕಿನಲ್ಲಿ ಆಟೋಗಳ ಸಂಖ್ಯೆ ಆಧಾರಿಸಿ ಆಟೋಗಳಿಗೆ ಅಂಟಿಸಿ ಪ್ರಚಾರ ಮಾಡಲಾಗುತ್ತದೆ. ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲಿ ಈ ಕೆಲಸ ಮಾಡಲಾಗುತ್ತಿದೆ ಎಂದರು.

ಬ್ಯಾನರ್ ಹಾಕಿಸುವಲ್ಲಿ ಯಾರಿಗೂ ಒತ್ತಡವಿಲ್ಲ. ಸ್ವಯಂ ಪ್ರೇರಿತರಾಗಿ ಈ ಕೆಲಸಕ್ಕೆ ಒಪ್ಪಿದ್ದಾರೆ. ವಾಜಪೇಯಿ ಅವರು ಮಾಡಿದ ಕೆಲಸವನ್ನು ಪ್ರಚಾರ ಪಡೆಯದೆ ಸೋಲು ಕಾಣಲಾಯ್ತು. ಆದರೆ ಈ ಬಾರಿ ಮೋದಿಯವರ ಕೆಲಸಗಳ ಬಗ್ಗೆ ಮನೆ ಮನೆ ಬಾಗಿಲಿಗೆ ಪ್ರಚಾರ ಮಾಡುವ ಮೂಲಕ ಮೋದಿ ಯೋಜನೆಗಳನ್ನು ತಿಳಿಸುವ ಉದ್ದೇಶವಾಗಿದೆ. ಸಮಾಜಕ್ಕೆ ಬಿಜೆಪಿ ಕೊಡುಗೆ ಏನು ಎಂದು ತಿಳಿಸುತ್ತೇವೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಕೆಲಸ ತಿಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ನಾನೊಬ್ಬ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಟಿಕೆಟ್ ಆಕಾಂಕ್ಷಿ ಇದ್ದೇನೆ. ಪಕ್ಷದ ವರಿಷ್ಟರು ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಪಕ್ಷ ಒಂದು ಕುಟುಂಬವಿದ್ದಂತೆ. ಕುಟುಂಬದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಬರುವುದು ಸಾಮಾನ್ಯ. ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬಗೆಹರಿಸಿಕೊಂಡು ಮುನ್ನಡೆಯುತ್ತೇವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡರಾದ ಅನಿತ್‌ಕುಮಾರ್, ರತ್ನಮ್ಮ, ಲೋಕನಾಥ್, ಮಲ್ಲಿಕಾರ್ಜನ್, ವಕ್ತಾರ ನಾಗರಾಜ್ ಬೇದ್ರೆ, ತಿಪ್ಪೇಸ್ವಾಮಿ, ಚಂದ್ರಕಲಾ, ವೆಂಕಟೇಶ್ ಯಾದವ್, ಶಶಿ, ನಗರಸಭೆ ಸದಸ್ಯ ದೀಪು ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!