ಸಂತರ ಅವಹೇಳನ: ಸಿದ್ದರಾಮಯ್ಯ ಕ್ಷಮೆಗೆ ಶಾಸಕ ಕಾಮತ್ ಆಗ್ರಹ

ಹೊಸದಿಗಂತ ವರದಿ, ಮಂಗಳೂರು:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದು ಸಂತರ ಬಗ್ಗೆ ಕೇವಲವಾಗಿ ಮಾತನಾಡಿ ಅವಹೇಳನ ಮಾಡಿದ್ದು, ತಕ್ಷಣ ಅವರು ಕ್ಷಮೆಯಾಚಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಸಲ್ಮಾನರ ಓಲೈಕೆಗಾಗಿ ಹಿಂದು ಸಂತರ ವಿರುದ್ಧ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ತನ್ನ ಸರಕಾರದ ಅವಧಿಯಲ್ಲಿ ಸಿದ್ಧರಾಮಯ್ಯ ಅವರು ಹಿಂದುಗಳಿಗೆ ಮಾಡಿದ ಅನ್ಯಾಯವನ್ನು ಹಿಂದು ಸಮಾಜ ಮರೆತಿಲ್ಲ ಎಂದು ಅವರು ಹೇಳಿದ್ದಾರೆ.
ಮುಸಲ್ಮಾನ ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡರೆ ತಪ್ಪೇನು, ಹಿಂದು ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆ ಎತ್ತಿದ ಸಿದ್ಧರಾಮಯನವರಿಗೆ ಮರೆವಿನ ಕಾಯಿಲೆಯಿದೆಯೇ ? ಮುಸಲ್ಮಾನ ಮಹಿಳೆಯರಿಗೆ ಬುರ್ಖಾ ಹಾಕುವುದಕ್ಕೆ ವಿರೋಧವಲ್ಲ, ತರಗತಿಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಸಮವಸ್ತ್ರ ಪಾಲಿಸಬೇಕು ಎನ್ನುವುದನ್ನು ನ್ಯಾಯಾಲಯವೂ ಹೇಳಿದೆ. ಒಬ್ಬ ಜನಪ್ರತಿನಿಧಿಯಾಗಿ ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸಿದ್ಧರಾಮಯ್ಯನವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದು ಸಮುದಾಯದ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಮಠ ಮಂದಿರಗಳಿಗೆ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಎಸಗಿದ ಅನಾಚಾರಗಳು ತಿಳಿದಿದೆ. ಸದ್ಯ ಮತ್ತದೇ ಕಾರ್ಯಕ್ಕೆ ಕೈ ಹಾಕಿ ಸಂತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಿದ್ಧರಾಮಯ್ಯ ಅವರು ಕ್ಷಮೆ ಕೇಳಬೇಕು ಎಂದು ಶಾಸಕ ಕಾಮತ್ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!