ಮುಂಬರುವ ವಿಧಾನಸಭೆ ಚುನಾವಣೆಯೇ ನನ್ನ ಕೊನೆಯ ಚುನಾವಣೆ: ಸಿದ್ದರಾಮಯ್ಯ

ಹೊಸದಿಗಂತ ವರದಿ, ಮೈಸೂರು:

ಮುಂಬರುವ ವಿಧಾನಸಭೆ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಾನು ಮುಂದೆ ಚುನಾವಣಾ ರಾಜಕೀಯ ಮಾಡುವುದಿಲ್ಲ, ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಮೈಸೂರು ತಾಲೂಕಿನಲ್ಲಿರುವ ತಮ್ಮ ಹುಟ್ಟೂರಾದ ಸಿದ್ದರಾಮಯ್ಯನಹುಂಡಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನ ನನ್ನನ್ನ ಮುಂದಿನ ಚುನಾವಣೆಯಲ್ಲಿ ವರುಣಾ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ, ಬಾದಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಆದರೆ, ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಪುನರ್ ಜನ್ಮ ನೀಡಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಅದೇ ಜನ ನನ್ನನ್ನ ಸೋಲಿಸಿದ್ದರು. ಆದರೆ ಐದಾರು ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನ ಗೆಲ್ಲಿಸಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರವನ್ನ ನಾನು ಯಾವಾಗಲೂ ಮರೆಯುವುದಿಲ್ಲ ಎಂದರು.
ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಸರಿಯಲ್ಲ: ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಕೆಲವು ಪ್ರದೇಶಗಳಲ್ಲಿ ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಹಾಕಿರುವುದು ಸರಿಯಲ್ಲ. ಬಿಜೆಪಿಯವರು ಕೆಲವು ವಿವಾದ ಸೃಷ್ಟಿಸಿ ಮತ ಕ್ರೋಢೀಕರಣ ಮಾಡಲು ಯತ್ನಿಸುತ್ತಿದ್ದಾರೆ. ಆ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ವ್ಯಾಪಾರಕ್ಕೆ ನಿರ್ಬಂಧ ಹಾಕುವುದರ ಹಿಂದೆ ಬಿಜೆಪಿ ಅಜೆಂಡಾ ಅಡಗಿದೆ. ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ವಿಚಾರದಲ್ಲಿ ಕಾಂಗ್ರೆಸ್ ಇಕ್ಕಟಿಗೆ ಸಿಲುಕಿಲ್ಲ. ಬಿಜೆಪಿಯೇ ಇಕ್ಕಟಿಗೆ ಸಿಲುಕಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!