ಡಿಪ್ರೆಷನ್‌ ಗೆ ಒಳಗಾದ I.N.D.I.A ಮೈತ್ರಿಕೂಟದ ನಾಯಕರು: ಜೆ.ಪಿ. ನಡ್ಡಾ

ಹೊಸದಿಗಂತ ವರದಿ, ಶಿವಮೊಗ್ಗ:

ಇಂಡಿ ಮೈತ್ರಿಕೂಟದ ನಾಯಕರು ಈಗಾಗಲೇ ಡಿಪ್ರೆಷನ್‌ಗೆ ಒಳಗಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ವ್ಯಂಗ್ಯವಾಡಿದ್ದಾರೆ.

ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಪ್ರೇರಣಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವೃತ್ತಿಪರರ ಸಮಾವೇಶದಲ್ಲಿ ಮಾತನಾಡಿದ ಅವರು, ಗೃಹ ಸಚಿವ ಅಮಿತ್ ಶಾ ಅವರ ಭಾಷಣವನ್ನೇ ನಕಲಿ ಮಾಡಿ ಪ್ರಸಾರ ಮಾಡುತ್ತಿದ್ದಾರೆ. ಡೀಪ್ ಫೇಕ್ ವಿಡಿಯೋ ಮಾಡಿ ಅದನ್ನು ಬೇರೆಯವರಿಗೆ ಕಳಿಸಿದ್ದಾರೆ. ಅದರ ಮೂಲ ಹುಡುಕಿದಾಗ ತೆಲಂಗಾಣ ಸಿಎಂ ರೇವಂತ ರೆಡ್ಡಿ ಅವರ ಫೋನ್ ಮೂಲಕ  ಸಾಮಾಜಿಕ ಜಾಲತಾಣದಲ್ಲಿ ಹರಿಬಿಟು ತಮ್ಮ ಮನಸ್ಥಿತಿಯನ್ನು ಪ್ರಕಟಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಡಿ ಮೈತ್ರಿಕೂಟದಲ್ಲಿ ಇರುವವರಿಗೆ ಅಜೆಂಡಾ ಇಲ್ಲ. ನರೇಂದ್ರ ಮೋದಿ ಅವರು ಭ್ರಷ್ಟಾಚಾರ ತೊಡೆದು ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಂಡಿ ಮೈತ್ರಿಕೂಟದ ಬಹುತೇಕ ನಾಯಕರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಯಾವುದೇ ಬದ್ಧತೆಯಿಲ್ಲ. ಆದರೆ ನಾವು ಸ್ಪಷ್ಟ ಕಲ್ಪನೆಯೊಂದಿಗೆ ಆಡಳಿತ ಮಾಡುತ್ತಿದ್ದೇವೆ. 10 ವರ್ಷಗಳ ಅವಧಿಯಲ್ಲಿ ಭಾರತ ಸಂಪೂರ್ಣ ಬದಲಾಗಿದೆ ಎಂದರು.
ಇಂದು ವಿಶ್ವದ ಯಾವುದೇ ವೇದಿಕೆಯಲ್ಲಿ ಭಾರತಕ್ಕೆ ಪ್ರಾತಿನಿಧ್ಯ ಸಿಗುತ್ತಿದೆ. ಅದು ಜಿ-7, ಜಿ-8 ಯಾವುದೇ ಇರಬಹುದು. ಸ್ವಾತಂತ್ರ್ಯ ನಂತರ ನಮ್ಮ ನೆರೆ ರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿಗೆ ಪ್ರಯತ್ನ ನಡೆದಿರಲಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ಮೊದಲು ಭೂತಾನ್ ಭೇಟಿ ನೀಡಿದರು. ನಂತರ ನೇಪಾಳಕ್ಕೆ, ಶ್ರೀಲಂಕಾಗೆ ಹೋಗಿ ಬಂದರು. 70 ವರ್ಷದವರೆಗೆ ನಮ್ಮ ಯಾವ ಪ್ರಧಾನಿ ನೇಪಾಳಕ್ಕೆ ಭೇಟಿ ನೀಡಿರಲಿಲ್ಲ ಎಂದರು.

10 ವರ್ಷಗಳಲ್ಲಿ ರಾಜಕೀಯ ಸಂಸ್ಕೃತಿ ಬದಲಾಗಿದೆ. ಜಾತಿ, ಧರ್ಮ ಆಧರಿಸಿ ಟಿಕೇಟ್ ನೀಡಲಾಗುತ್ತಿತ್ತು. ಆದರೆ ಈಗ ರಿಪೋರ್ಟ್ ಕಾರ್ಡ್ ಗಮನಿಸಿ ಅವಕಾಶ ನೀಡಲಾಗುತ್ತಿದೆ. ರಾಜಕೀಯದ ವ್ಯಾಖ್ಯೆಯೇ ಈಗ ಬದಲಾಗಿದೆ. ಕೊರೊನಾ ಬಳಿಕ ವಿಶ್ವದ ಅನೇಕ ರಾಷ್ಟ್ರಗಳ ಆರ್ಥಿಕತೆ ಕುಸಿಯಿತು. ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಅಮೇರಿಕಾ, ರಷ್ಯಾ, ಜಪಾನ್, ಚೀನಾ ಮೊದಲಾದ ದೇಶಗಳ ಆರ್ಥಿಕತೆ ಚಿಂತಾಜನಕವಾಯಿತು. ಆದರೆ ಭಾರತದ ಆರ್ಥಿಕತೆ ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿಕೆ ಆಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!