ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆ: ಗೆಹ್ಲೋಟ್‌ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾನುವಾರ ಸಂಜೆ ಜೈಪುರದಲ್ಲಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಿರ್ಣಯವನ್ನು ಅಂಗೀಕರಿಸಲಾಗುವುದು.
ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆಯ ನಿರ್ಧಾರವನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತೆಗೆದುಕೊಳ್ಳಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಭಾನುವಾರ ಸಂಜೆ 7 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಜಸ್ಥಾನದ ಉಸ್ತುವಾರಿ ಅಜಯ್ ಮಾಕನ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ.

ಇಂದು ನಡೆಯಲಿರುವ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೆಹ್ಲೋಟ್ ರಾಜೀನಾಮೆ ಜತೆಗೆ ರಾಜಸ್ಥಾನದ ನೂತನ ಮುಖ್ಯಮಂತ್ರಿ ಯಾರು ಎಂಬ ವಿಚಾರ ಚರ್ಚೆಯಾಗುವ ಸಾಧ್ಯತೆಗಳಿವೆ. ಸೋನಿಯಾ, ರಾಹುಲ್‌ರಂತಹ ನಾಯಕರು ಸಚಿನ್ ಪೈಲಟ್‌ಗೆ ಸಿಎಂ ಪಟ್ಟ ನೀಡಲು ಒಲವು ತೋರುತ್ತಿದ್ದಾರೆ. ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಿದರೆ ಸಚಿನ್ ಪೈಲಟ್ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿ ಎನ್ನಲಾಗಿದೆ. ಪೈಲಟ್ ಶುಕ್ರವಾರ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಅವರನ್ನು ಭೇಟಿಯಾಗಿದ್ದರು. ಕುತೂಹಲದ ಸಂಗತಿಯೆಂದರೆ ಜೋಶಿಯವರ ಹೆಸರೂ ಸುದ್ದಿಯಲ್ಲಿದೆ.

ಈ ಹಿಂದೆ ಪಕ್ಷದ ಅಧ್ಯಕ್ಷರಾಗಿದ್ದರೂ ಮುಖ್ಯಮಂತ್ರಿ ಮತ್ತು ಸಚಿವರಾಗಿ ಮುಂದುವರಿಯಬಹುದು ಎಂದು ಗೆಹ್ಲೋಟ್ ಹೇಳಿದ್ದರು. ಆದರೆ, ಒಬ್ಬ ವ್ಯಕ್ತಿ ಒಂದೇ ಹುದ್ದೆಯನ್ನು ಹೊಂದಿರಬೇಕೆಂದು ರಾಹುಲ್ ಗಾಂಧಿ ಸ್ಪಷ್ಟನೆ ಮೇರೆಗೆ ಗೆಹ್ಲೋಟ್ ನಿರೀಕ್ಷೆ  ಹುಸಿಯಾಯಿತು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಸೆಪ್ಟೆಂಬರ್ 30 ರವರೆಗೆ ನಾಮಪತ್ರ ಸಲ್ಲಿಕೆಯಾಗಲಿದ್ದು, ಅಕ್ಟೋಬರ್ 19 ರಂದು ನೂತನ ಕಾಂಗ್ರೆಸ್ ಅಧ್ಯಕ್ಷರ ಫಲಿತಾಂಶ ಪ್ರಕಟವಾಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!