ಎಚ್‌ಡಿಎಫ್‌ಸಿ ಬ್ಯಾಂಕ್ ಬಳಕೆದಾರರ ಗೌಪ್ಯ ಮಾಹಿತಿ ಸೋರಿಕೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಪ್ರತಿಷ್ಟಿತ ಬ್ಯಾಂಕುಗಳಲ್ಲೊಂದಾದ ಎಚ್‌ಡಿಎಫ್‌ಸಿ (HDFC) ಬ್ಯಾಂಕಿನ ಸಾವಿರಾರು ಬಳಕೆದಾರರ ಗೌಪ್ಯ ಮಾಹಿತಿಯನ್ನು ಕದ್ದಿರುವುದಾಗಿ ಸೈಬರ್‌ಕ್ರೈಮ್‌ ಖದೀಮರ ಗುಂಪೊಂದು ಹೇಳಿಕೊಂಡಿದೆ. ಈ ಕುರಿತು ಹ್ಯಾಕರ್‌ ಗಳು ಅಂತರ್ಜಾಲದಲ್ಲಿ ಬರೆದುಕೊಂಡಿದ್ದು ಎಚ್‌ಡಿಎಫ್‌ಸಿ (HDFC) ಬ್ಯಾಂಕಿನ ಭಾರತ ಮೂಲದ 6,00,000 ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಲಪಟಾಯಿಸಿರುವುದಾಗಿ ಹೇಳಿದ್ದಾರೆ.

ಆದರೆ ಬ್ಯಾಂಕ್‌ ಈ ಆರೋಪಗಳನ್ನು ತಳ್ಳಿ ಹಾಕಿದೆ. “ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಯಾವುದೇ ಡೇಟಾ ಸೋರಿಕೆ ಆಗಿಲ್ಲ. ನಮ್ಮ ಸಿಸ್ಟಮ್‌ಗಳನ್ನು ಯಾವುದೇ ರೀತಿಯಲ್ಲಿ ಹ್ಯಾಕ್‌ ಮಾಡಲಾಗಿಲ್ಲ ಎಂದು ನಾವು ಹೇಳಲು ಬಯಸುತ್ತೇವೆ. ನಮ್ಮ ಸಿಸ್ಟಂಗಳ ಬಗ್ಗೆ ನಮಗೆ ವಿಶ್ವಾಸವಿದೆ,” ಎಂದು ಟ್ವಿಟರ್‌ನಲ್ಲಿ ಡೇಟಾ ಸೋರಿಕೆ ಆರೋಪದ ಕುರಿತು ಎಚ್‌ಡಿಎಫ್‌ಸಿ ಸ್ಪಷ್ಟಪಡಿಸಿದೆ.

‘ಕರ್ನಲ್‌ವೇರ್’ ಎಂಬ ಹೆಸರು ಹೊಂದಿರುವ ಹ್ಯಾಕರ್‌ಗಳು 7.5 GBಯಷ್ಟು ಕ್ಲೈಂಟ್ ಖಾತೆಗಳ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಹ್ಯಾಕರ್ ಫೋರಮ್ ‘Breached.vc’ ಗೆ ವರ್ಗಾಯಿಸಿದ್ದಾರೆ ಎಂದು ವರದಿಗಳು ಹೇಳಿವೆ. ಕಳ್ಳತನವಾದ ಮಾಹಿತಿಯಲ್ಲಿ ಪೂರ್ಣ ಹೆಸರುಗಳು (ಮಧ್ಯದ ಹೆಸರಿನೊಂದಿಗೆ), ಜನ್ಮ ದಿನಾಂಕ, ವಯಸ್ಸು, ಫೋನ್ ಸಂಖ್ಯೆಗಳು, ವೈಯಕ್ತಿಕ ಇಮೇಲ್‌ಗಳು, ಶಾಶ್ವತ ಇಮೇಲ್‌ಗಳು, ಕೆಲಸದ ಇಮೇಲ್‌ಗಳು, ನಿವಾಸ ವಿಳಾಸ, ಶಾಶ್ವತ ವಿಳಾಸ, ಪಿನ್ ಕೋಡ್‌ಗಳು, ಸಾಲದ ಮಾಹಿತಿ, ಕ್ರೆಡಿಟ್ ಸ್ಕೋರ್‌ಗಳು, ಎಕ್ಸ್‌ಪೀರಿಯನ್ ಸ್ಕೋರ್‌ಗಳು, ಡೀಲರ್ ಹೆಸರುಗಳು, ವಹಿವಾಟು ದಾಖಲೆಗಳು, ಆಸ್ತಿ ದಾಖಲೆಗಳು ಮುಂತಾದ ಹಲವು ವಿಷಯಗಳು ಸೋರಿಕೆಯಾಗಿದೆ ಎಂದು ಹ್ಯಾಕರ್‌ ಗಳು ಹೇಳಿದ್ದಾರೆ.

“ನಾವು ನಿಯಂತ್ರಕ CERT-IN ಗೆ ಸೂಚನೆ ನೀಡಿದ್ದೇವೆ ಮತ್ತು ಈ ಘಟನೆಯನ್ನು ಪೂರ್ಣವಾಗಿ ತನಿಖೆ ಮಾಡಲು ನಾವು ಅವರೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಬ್ಯಾಂಕ್‌ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!