ಧರ್ಮ-ಹಿಂದುತ್ವ ಬಿಟ್ಟು ರೈತ, ನಿರುದ್ಯೋಗ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣೆ ನಡೆಸಿ: ಬಿಜೆಪಿಗೆ ಪ್ರಿಯಾಂಕಾ ಗಾಂಧಿ ಸವಾಲು

ಹೊಸದಿಗಂತ ವರದಿ, ಮಂಡ್ಯ:

ಪಾಕಿಸ್ತಾನ, ಧರ್ಮ, ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಸುವುದನ್ನು ಬಿಟ್ಟು ನಿಮಗೆ ತಾಕತ್ತಿದ್ದರೆ ನಿರುದ್ಯೋಗ, ರೈತರ ಆತ್ಮಹತ್ಯೆ ಮುಂದಿಟ್ಟುಕೊಂಡು ಚುನಾವಣೆ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಬಹಿರಂಗ ಸವಾಲು ಹಾಕಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ) ಆವರಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯನ್ನು ಉದ್ಘಾಟಿಸಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ನಿಮ್ಮ ಸಮಸ್ಯೆಯನ್ನು ಕೇಳದೆ ಕೇವಲ ಭಾಷಣ ಮಾಡಿ ಹೋಗುತ್ತಿದ್ದಾರೆ. ಉದ್ಯೋಗವಿಲ್ಲದೆ ಯುವಕರು, ಬೆಲೆ ಏರಿಕೆಯಿಂದ ರೈತರು, ಮಹಿಳೆಯರು ತತ್ತರಿಸಿ ಹೋಗಿದ್ದಾರೆ. ಬೆಂಬಲ ಬೆಲೆ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಚಕಾರ ಎತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅವರು ಏನೇ ಮಾಡಲಿ, ಪ್ರಸ್ತುತ ಬದಲಾವಣೆ ಗಾಳಿ ಬೀಸುತ್ತಿದ್ದು, ನೀವೇ ಬದಲಾವಣೆ ತರಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.

ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ ಹಾಕಿ :
ನೀವು ನಿಮ್ಮ ಮಕ್ಕಳ ಬದುಕು, ಭವಿಷ್ಯ, ಆರೋಗ್ಯ ಎಲ್ಲದರ ಮೇಲೂ ಗಮನವಿಟ್ಟು ಮತ ಹಾಕಬೇಕು. ನಿಮ್ಮ ಕಷ್ಟಕ್ಕೆ ಗೌರವ ಸಿಗಬೇಕು. ಅವರು ಸ್ವಾರ್ಥಕ್ಕೋಸ್ಕರ ನಮ್ಮಲ್ಲಿ ಜಗಳ ಹತ್ತಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಚುನಾವಣೆಯಲ್ಲಿ ದೊಡ್ಡ ದೊಡ್ಡ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಮೇಲೆ ಯಾವುದನ್ನು ಈಡೇರಿಸಲ್ಲ. ಹಿಂದೆ ಬಿಜೆಪಿ ಕೊಟ್ಟಿದ್ದ 25 ಭರವಸೆಗಳಲ್ಲಿ 24ನ್ನು ಈಡೇರಿಸಿಲ್ಲ. ಲಕ್ಷಾಂತರ ಕೆಲಸಗಳು ಖಾಲಿ ಇವೆ. ಆದರೆ ನಿಮಗೆ ಕೊಡಲು ಈ ಸರ್ಕಾರ ತಯಾರಿಲ್ಲ. ಹಾಗಾಗಿ ಜನರು ಮಾತಿಗೆ ಮರುಳಾಗಿ ಮತ ಹಾಕಬೇಡಿ, ಆತ್ಮಸಾಕ್ಷಿಗೆ ಮೇಲೆ ನಂಬಿಕೆಯಿಟ್ಟು ಮತ ಹಾಕಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪ್ರಣಾಳಿಕೆಗೆ ಶ್ಲಾಘನೆ :
ರಾಜ್ಯದಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡಲಾಗುವುದು. ನಿಮ್ಮ ಅಕೌಂಟ್‌ಗೆ ನೇರವಾಗಿ ಹಣ ಬರುತ್ತದೆ. 200 ಯೂನಿಟ್ ಉಚಿತ ವಿದ್ಯುತ್, ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.

ನಾನು ಇಂದು ಮಾತು ಕೊಡುತ್ತಿದ್ದೇನೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರರಷ್ಟು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತೇವೆ. ಖಾಲಿ ಇರುವ 2.5 ಲಕ್ಷ ಉದ್ಯೋಗವನ್ನು ತುಂಬುತ್ತೇವೆ, 10 ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ತಿಳಿಸಿದರು.
ಅಂಗನವಾಡಿ ಕಾರ‌್ಯಕರ್ತೆಯರಿಗೆ 15 ಸಾವಿರ ರೂ. ಸಂಬಳ, ನಿವೃತ್ತಿಯಾದಾಗ 3 ಲಕ್ಷ ರೂ., ಆಶಾ ಕಾರ‌್ಯಕರ್ತೆಯರಿಗೆ 8 ಸಾವಿರ ಸಂಬಳ ನೀಡಲಾಗುವುದು. ಇದೆಲ್ಲವನ್ನು ಲೆಕ್ಕ ಹಾಕಿದರೆ ವರ್ಷಕ್ಕೆ ಪ್ರತಿ ತಿಂಗಳು ಒಂದು ಮನೆಗೆ 8,500 ರೂ. ಸಿಗುತ್ತದೆ ಎಂದರು.

ಭರವಸೆಗಳ ಮಹಾಪೂರ:
ರೈತರಿಗಾಗಿ ಸಹಕಾರ ಸಂಘ ತೆರೆದು 500 ಕೋಟಿ ಹಾಕುತ್ತೇವೆ. ಮೇಕೆದಾಟು, ಮಹದಾಯಿ ಯೋಜನೆಯನ್ನು ಸರಿಪಡಿಸುತ್ತೇವೆ. ಲೀಟರ್ ಹಾಲಿಗೆ 7 ರೂ. ಪ್ರೋತ್ಸಾಹ ನೀಡಲಾಗುವುದು. ಹಾಲು ಹಾಕುವವರಿಗೆ 50 ಸಾವಿರ ರೂ., ಮೀನುಗಾರರಿಗೆ 6 ಸಾವಿರ, ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ಅಳವಡಿಸಲು ಶೇ. 100 ರಷ್ಟು ಸಬ್ಸಿಡಿ, ಬಡವರು ಪೌರಕಾರ್ಮಿಕರಿಗೆ 3 ಸಾವಿರ ಕೋಟಿ ಇಡಲಾಗುವುದು ಎಂದು ತಿಳಿಸಿದರು.

ಬೀದರ್-ಚಾಮರಾಜನಗರದವರೆಗೆ ಹೆದ್ದಾರಿ ನಿರ್ಮಿಸಿ ಟೌನ್‌ಶಿಪ್ ಮಾಡಲಾಗುವುದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ಒತ್ತು, ಗಾರ್ಮೆಂಟ್ಸ್‌ ಸೇರಿದಂತೆ ಪ್ರತಿ ಉದ್ಯೋಗಕ್ಕೆ ಅನುದಾನ, ಬೆಂಗಳೂರಿನಲ್ಲಿ ದುಬೈ ಮಾದರಿಯಲ್ಲಿ ನ್ಯಾಷನಲ್ ಪಾರ್ಕ್, ಬೆಂಗಳೂರು ಮಾತ್ರವಲ್ಲದೆ ಪ್ರತಿ ಜಿಲ್ಲೆಯಲ್ಲೂ ಐಟಿ ಸೆಕ್ಟರ್ ಮಾಡಲಾಗುವುದು, ಎಲೆಕ್ಟ್ರಾನಿಕ್ ವಾಹನಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!