ಸಕ್ರಿಯ ರಾಜಕಾರಣಕ್ಕೆ ಬರುವ ಚಿಂತನೆ ಮಾಡಿಲ್ಲ: ನಟಿ ರಮ್ಯಾ

ಹೊಸದಿಗಂತ ವರದಿ, ಮಂಡ್ಯ:

ಸಧ್ಯಕ್ಕೆ ನಾನು ಸಕ್ರಿಯ ರಾಜಕಾರಣಕ್ಕೆ ಬರುವ ಚಿಂತನೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ಮಾಡುತ್ತೇನೆ ಎಂದು ಮಾಜಿ ಸಂಸದೆ ರಮ್ಯಾ (ದಿವ್ಯಸ್ಪಂದನ) ಸ್ಪಷ್ಟಪಡಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಧ್ಯ ಸಿನಿಮಾ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಸುಮ್ಮನಿರುವ ಬದಲು ಪ್ರೊಡಕ್ಷನ್ ಮಾಡ್ತಾ ಇದ್ದೇನೆ. ಉತ್ತರಕಾಂಡ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಇದರಲ್ಲಿ ನಾನು ಬಿಸಿಯಾಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಗಾಗ್ಗೆ ಮಂಡ್ಯಕ್ಕೆ ಬರುತ್ತಿದ್ದೇನೆ :
ನಾನು ಆಗಾಗ್ಗೆ ಮಂಡ್ಯಕ್ಕೆ ಬಂದು ಹೋಗುತ್ತಿರುತ್ತೇನೆ. ಮೊನ್ನೆಯಷ್ಟೇ ನಿಮಿಷಾಂಭ ದೇವಸ್ಥಾನಕ್ಕೂ ಬಂದು ಹೋಗಿದ್ದೆ. ಕ್ಯಾಮೆರಾ ಮುಂದೆ ಕಾಣಿಸಿಕೊಂಡಿಲ್ಲ ಅಷ್ಟೆ. ಇಷ್ಟಕ್ಕೆ ನನ್ನ ಬಗ್ಗೆ ಇಲ್ಲದ ಗೊಂದಲ ಸೃಷ್ಠಿಸುವುದು ಸರಿಯಲ್ಲ ಎಂದು ಹೇಳಿದರು.
ಚುನಾವಣೆಗೆ ಸ್ಪರ್ಧಿಸುವ ಚಿಂತನೆ ಮಾಡಿಲ್ಲ. ಸಧ್ಯ ನಾನು ನಮ್ಮ ಅಭ್ಯರ್ಥಿಗಳ ಪರವಾಗಿ ಸ್ಟಾರ್ ಕ್ಯಾಂಪೆನರ್ ಆಗಿ ಬಂದಿದ್ದೇನೆ. ನಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದರು.

ಮೈಸೂರು, ವರುಣ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಮಂಡ್ಯಕ್ಕೂ ನನಗೂ ಅವಿನಾಭಾವ ಸಂಬಂಧ ಇದೆ. ಇದು ನನ್ನ ತಾಯಿ ಊರು ಕೂಡ. ನಾನು ಕಷ್ಟದಲ್ಲಿದ್ದಾಗ ಮಂಡ್ಯದ ಜನರು ನನ್ನ ಜೊತೆಗೆ ನಿಂತರು. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅವರ ಮೇಲೆ ಇರುವ ಗೌರವ ಕೂಡ ಯಾವತ್ತೂ ಕಡಿಮೆಯಾಗುವುದಿಲ್ಲ ಎಂದು ಹೇಳಿದರು.
ಇಲ್ಲಿ ಕೇವಲ ರಾಜಕೀಯ ಅಲ್ಲ. ಈ ಊರಲ್ಲಿ ನನಗೆ ಫ್ಯಾಮಿಲಿಯ ಸಂಬಂಧವಿದೆ. ಇದನ್ನು ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದರು.

ಟ್ಯೂಮರ್ ಆಗಿ ಸರ್ಜರಿ ಮಾಡಿಸಿಕೊಂಡಿದ್ದೆ :
ಅಂಬರೀಶ್ ಅವರು ನಿಧನರಾದಾಗ ರಮ್ಯಾ ಬಂದಿಲ್ಲ ಎಂಬ ಅಪಪ್ರಚಾರ ಇದೆ. ಅವರು ತೀರಿಕೊಂಡಾಗ ನನಗೆ ಟ್ಯೂಮರ್ ಬಂದಿತ್ತು. ಸರ್ಜರಿ ಮಾಡಿಸಿಕೊಂಡಿದ್ದೆ. ಅದರಿಂದ ನಾನು ಅವರ ನಿಧನ ಸಂದರ್ಭದಲ್ಲಿ ಬರಲಾಗಲಿಲ್ಲ. ಇದನ್ನು ನಾನು ಎಲ್ಲೂ ಹಂಚಿಕೊಂಡಿಲ್ಲ. ವೈಯಕ್ತಿಕ ವಿಚಾರಗಳನ್ನು ಕ್ಯಾಮೆರಾ ಮುಂದೆ ಹಂಚಿಕೊಳ್ಳುವುದು ನನ್ನ ಸ್ವಭಾವವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಬೇರೆಯವರು ಕ್ಯಾಮೆರಾ ಮುಂದೆ ಬಂದು ಎಲ್ಲವನ್ನೂ ಹೇಳುತ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ನನ್ನ ಕೆಲಸವಷ್ಟೇ ಮಾತನಾಡುತ್ತೇನೆ. ಯಾವುದೇ ವೈಯಕ್ತಿಕ ವಿಚಾರಗಳನ್ನು ಮಾತನಾಡುವುದಿಲ್ಲ. ಆದರೆ ಕೆಲವರು ಇದರ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಜರಿ ಆದ ಬಳಿಕ ನನಗೆ ಆಟೋ ಇಮ್ಯೂನ್ ಕಂಡಿಷನ್ ಕೂಡ ಆಯಿತು. ಇದನ್ನೆಲ್ಲಾ ಹೇಳಿ ಸಿಂಪತಿ ಪಡೆಯಲು ನನಗೆ ಇಷ್ಟವಿಲ್ಲ ಎಂದು ಉತ್ತರಿಸಿದರು.

ತೊಟ್ಟಿ ಮನೆ ಮಾಡುತ್ತೇನೆ :
ಈ ಹಿಂದೆ ಮಂಡ್ಯದಲ್ಲಿ ತೊಟ್ಟಿ ಮಾಡಿಕೊಂಡು ಇಲ್ಲೇ ಇರುತ್ತೇನೆ ಎಂದು ಹೇಳಿದ್ದೆ. ಮಂಡ್ಯದ ಗೋಪಾಲಪುರ ಗ್ರಾಮದಲ್ಲಿ ನಮ್ಮ ತಾತನ ತೊಟ್ಟಿ ಮನೆ ಇದೆ. ನಾನೊಂದು ತೊಟ್ಟಿ ಮನೆ ಮಾಡಬೇಕು ಎಂಬ ಆಸೆ ಇದೆ. ಆದರೆ ಯಾವಾಗ ಈಡೇರುತ್ತೋ ಗೊತ್ತಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಮಂಡ್ಯ ಖಾಲಿ ಮಾಡಿದರು ಎಂದು ಅಪಪ್ರಚಾರ ಮಾಡಿದ್ದರು. ನಾನು ಯಾವಾಗಲೂ ಗೌಡತಿನೆ. ಇದನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಗೌಡರ ಹುಡುಕ ಸಿಕ್ಕಾಗ ನೋಡ್ತೇನೆ :
ಗೌಡರ ಹುಡುಗ ಸಿಕ್ಕಾಗ ನಾನು ಮದುವೆ ಮಾಡಿಕೊಳ್ಳುತ್ತೇನೆ. ಹುಡುಗನನ್ನು ಮೊದಲು ಹುಡುಕಿ. ನನಗೂ ನೋಡಿ ನೋಡಿ ಸಾಕಾಗಿದೆ. ಬೇಕಿದ್ದರೆ ನೀವೇ ಸ್ವಯಂವರ ಏರ್ಪಾಟು ಮಾಡಿ ಎಂದು ಪ್ರಶ್ನೆಯೊಂದಕ್ಕೆ ಹಾಸ್ಯಭರಿತವಾಗಿ ಉತ್ತರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!