ಹೊಸದಿಂತ ಡಿಜಿಟಲ್ ಡೆಸ್ಕ್:
ಮದುವೆಯಾಗಿ ಎರಡು ಮಕ್ಕಳಿದ್ದರೂ ಲೈಂಗಿಕ ಉದ್ದೇಶಕ್ಕೆ ಬಳಸಿಕೊಳ್ಳಲು ವಿದ್ಯಾರ್ಥಿನಿ ಜೊತೆ ಪ್ರೀತಿ ನಾಟಕ ಆಡಿದ ಉಪನ್ಯಾಸಕನನ್ನು ಬಂಧಿಸಲಾಗಿದೆ.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾದ ಉಪನ್ಯಾಸಕರೇ ವಿದ್ಯಾರ್ಥಿನಿಯನ್ನು ಮರುಳು ಮಾಡಿ, ಪ್ರೀತಿಪ್ರೇಮದ ಹುಚ್ಚು ಹಿಡಿಸಿದ್ದಾರೆ. ಬಳ್ಳಾರಿ ನಗರದ ಖಾಸಗಿ ಕಾಲೇಜೊಂದರ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರವಿಕಿರಣ್ ಬಂಧಿತ ಆರೋಪಿಯಾಗಿದ್ದಾನೆ. ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನೇ ಈತ ಟಾರ್ಗೆಟ್ ಮಾಡಿದ್ದನು.
2025 ರಲ್ಲಿ ಉಪನ್ಯಾಸಕ ರವಿಕಿರಣ್ ಹಾಗೂ ವಿದ್ಯಾರ್ಥಿನಿ ನಡುವೆ ಕಾಲೇಜಿನಲ್ಲಿ ಪರಿಚಯವಾಗಿ ಸ್ನೇಹ ಬೆಳೆದಿದೆ. ಇಬ್ಬರ ನಡುವೆ ಸಲುಗೆ ಬೆಳೆಯುತ್ತಿದ್ದಂತೆ ವಿದ್ಯಾರ್ಥಿನಿಯ ಹೆತ್ತವರ ಮತ್ತು ಸಮಾಜದ ವಿರೋಧದ ನಡುವೆಯೂ, ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿ, ಪದೇಪದೇ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ವಿದ್ಯಾರ್ಥಿನಿಗೆ ರವಿಕಿರಣ್‌ಗೆ ಮದುವೆಯಾಗಿರುವ ವಿಷಯವಾಗ್ಲೀ, ಮಕ್ಕಳಿರುವ ವಿಷಯವಾಗ್ಲಿ ಗೊತ್ತಿರಲಿಲ್ಲ. ತಡವಾಗಿ ಈ ವಿಚಾರ ಬೆಳಕಿಗೆ ಬಂದ ನಂತರ ತಾನು ಮೋಸ ಹೋಗಿದ್ದೇನೆ ಎಂದು ಗೊತ್ತಾಗಿದೆ. ಪೋಷಕರು ನೀಡಿದ ಲಿಖಿತ ದೂರಿನ ಅನ್ವಯ ಪೋಕ್ಸೋ ಮತ್ತು ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಬಳ್ಳಾರಿ ಮಹಿಳಾ ಠಾಣೆಯ ಪೊಲೀಸರು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಕಾಮುಕ ರವಿಕಿರಣ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



